‘ರಾಜ’ಸ್ಥಾನದಲ್ಲಿ ಝಿಕಾ ವೈರಸ್​: 106 ಮಂದಿಗೆ ಸೋಂಕು

ನವದೆಹಲಿ: ರಾಜಸ್ಥಾನದಲ್ಲಿ ಝಿಕಾ ವೈರಸ್ ಪ್ರಕರಣ ನೂರರ ಗಡಿ ದಾಟಿದೆ. ವೈರಸ್​ಗೆ ಎಚ್ಚೆತ್ತ ಕೇಂದ್ರ ಸರ್ಕಾರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ತಂಡವನ್ನು ರಾಜ್ಯಕ್ಕೆ ಕಳುಹಿಸಿದೆ. ಝಿಕಾ ವೈರಸ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ರಾಜಸ್ಥಾನದಲ್ಲಿ ಝಿಕಾ ವೈರಸ್​ ಸೋಂಕು 23 ಮಂದಿ ಗರ್ಭಿಣಿಯರಿಗೆ ತಗುಲಿದೆ ಅಂತ ಕೆಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಹೊಸದಾಗಿ 20 ಝಿಕಾ ವೈರಸ್​ ಪ್ರಕರಣಗಳು ಜೈಪುರ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಪತ್ತೆಯಾಗಿದ್ದು, ಒಟ್ಟಾರೆಯಾಗಿ 106 ಮಂದಿ ಇದರ ಸೋಂಕಿನಿಂದ ಬಳಲುತ್ತಿದ್ದಾರೆ.

ಐಸಿಎಂಆರ್​ನ ಪರಿಣಿತರ ತಂಡ ಈಗಾಗಲೇ ಜೈಪುರ​ ತಲುಪಿದ್ದು, ಸಮಗ್ರ ಸೊಳ್ಳೆ ನಿರ್ವಹಣಾ ಕಾರ್ಯಕ್ರಮದ ಭಾಗವಾಗಿ ಝಿಕಾ, ಡೆಂಘ್ಯೂ ಹಾಗೂ ಚಿಕನ್​ ಗುನ್ಯಾ ವೈರಸ್​ ಹರಡುವಂತಹ ಸೊಳ್ಳೆಗಳನ್ನು ಕೊಲ್ಲುವ ಕಾರ್ಯವನ್ನು ತೀವ್ರಗೊಳಿಸಿದೆ. ದಟ್ಟವಾದ ಜನಸಂಖ್ಯೆ ಹೊಂದಿರುವ ಶಾಸ್ತ್ರಿನಗರ ಹಾಗೂ ಸಿಂಧಿ ಕ್ಯಾಂಪ್​ನಲ್ಲಿ ತೆಗೆದುಕೊಳ್ಳಲಾದ ಸ್ಯಾಂಪಲ್​ನಲ್ಲಿ ಕೆಲವು ಸೊಳ್ಳೆಗಳಲ್ಲಿ ಝಿಕಾ ವೈರಸ್​ ಇರುವುದು ಪತ್ತೆಯಾಗಿದೆ. ರಾಜಸ್ಥಾನದ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವೀಣು ಗುಪ್ತಾ ಜೈಪುರದಲ್ಲಿ ಸಭೆ ನಡೆಸಿ, ಸೋಂಕಿತ ಪ್ರಕರಣಗಳ ನವೀಕರಿಸಿದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.

ಅತಿ ಹೆಚ್ಚು ಝಿಕಾ ವೈರಸ್​ಗಳು ಶಾಸ್ತ್ರಿನಗರದಲ್ಲಿ ಕಂಡುಬಂದಿದ್ದು, ನಿಯಂತ್ರಣ ಕ್ರಮಗಳು ಭರದಿಂದ ಸಾಗಿದೆ. ಸುಮಾರು 1 ಲಕ್ಷ ಮನೆಗಳಿದ್ದು, 330 ತಂಡ ಸೊಳ್ಳೆಗಳನ್ನು ನಿಯಂತ್ರಿಸುವ ಕೆಲಸದಲ್ಲಿ ನಿರತವಾಗಿದೆ.
ಝಿಕಾ ಸೋಂಕಿಗೆ ಒಳಗಾಗಿದ್ದ ರೋಗಿಗಳು ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆ. 3ರಿಂದ 4ರೋಗಿಗಳು ಝಿಕಾ ರೋಗದ ಲಕ್ಷಣಗಳನ್ನು ಹೊಂದಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

 ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv