ಟಾಯ್ಲೆಟ್​​ ಪಕ್ಕ ಕೂತು 36 ಗಂಟೆ ಜರ್ನಿ ಮಾಡಿದ ಯುವ ಕುಸ್ತಿಪಟುಗಳು..!

ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಅನ್ನೋ ಗಾದೆ ಮಾತು ಕ್ರೀಡಾ ಕ್ಷೇತ್ರಕ್ಕೆ ಸರಿಯಾಗಿ ಅನ್ವಯಿಸುತ್ತೆ. ಒಂದು ಕಡೆ ಸ್ಟಾರ್ ಆಟಗಾರರಿಗೆ ಐಷರಾಮಿ ಸೌಲಭ್ಯಗಳನ್ನ ನೀಡುವ ಸರ್ಕಾರಗಳು, ಮತ್ತೊಂದೆಡೆ ಉದಯೋನ್ಮುಖ ಆಟಗಾರರನ್ನ ಎಷ್ಟು ಹೀನಾಯವಾಗಿ ಕಾಣುತ್ತೆ ಅನ್ನೋದಕ್ಕೆ ಇಲ್ಲಿದೆ ಉದಾಹರಣೆ.

ಅವರಲ್ಲಿ ಯಾರು ಸಾಮಾನ್ಯರಲ್ಲ. ರಾಷ್ಟ್ರ ಮಟ್ಟದ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ತಮ್ಮ ರಾಜ್ಯಕ್ಕೆ ಕೀರ್ತಿ ತಂದ ಕುಸ್ತಿಪಟುಗಳು. ಆದ್ರೆ ಇಂತಹ ಸಾಧನೆ ಮಾಡಿದವರನ್ನ ನಡೆಸಿಕೊಂಡ ರೀತಿ ಮಾತ್ರ ಶೋಚನೀಯ. ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಮಹಾರಾಷ್ಟ್ರದ ಯುವ ಕುಸ್ತಪಟುಗಳು ವಿವಿಧ ವಿಭಾಗಗಳಲ್ಲಿ ಪದಕಗಳನ್ನ ಮುಡಿಗೇರಿಸಿಕೊಂಡು ಸಂತಸ ಅಲೆಯಲ್ಲಿ ತೇಲಾಡುತ್ತಿದ್ರು. ಆದ್ರೆ ಇವರ ಸಂತೋಷ ಬೇಜಾರಿಗೆ ಮರಳಲು ಬಹಳ ಸಮಯ ಬೇಕಾಗಲಿಲ್ಲ.

ಪಂದ್ಯಾವಳಿ ಮುಗಿದ ನಂತರ ಖುಷಿಯಿಂದ ತವರಿಗೆ ಮರಳ ಬೇಕಿತ್ತು. ಆದ್ರೆ ಯುವತಿಯರು ಸೇರಿದಂತೆ 20 ಜನ ಯುವ ಕುಸ್ತಿಪಟುಗಳು ಹಾಗೂ ತರಬೇತಿ ಸಿಬ್ಬಂದಿ ಕುಳಿತುಕೊಳ್ಳಲು ಸೀಟ್​ ಇಲ್ಲದೇ ರೈಲಿನಲ್ಲಿ ಬರೋಬ್ಬರಿ 36 ಗಂಟೆ ಯಮಯಾತನೆ ಅನುಭವಿಸಿದ್ದಾರೆ. ರಾತ್ರಿಯಿಡೀ ಶೌಚಾಲಯ ದುರ್ವಾಸನೆಗೆ ಮೂಗು ಮುಚ್ಚಿಕೊಂಡು ಕಾಲ ಕಳೆದಿದ್ದಾರೆ. ಇವರಿಗೆ ಆಸನಗಳ ವ್ಯವಸ್ಥೆ ಮಾಡಬೇಕಾಗಿದ್ದ ಆಯೋಜಕರು ಕೇವಲ ಟೆಕೆಟ್​ ನೀಡಿ ಕೈ ತೊಳೆದುಕೊಂಡಿದ್ದಾರೆ. ತಮ್ಮ ರಾಜ್ಯಕ್ಕೆ ಕೀರ್ತಿ ತಂದ ಕ್ರೀಡಾಪಟುಗಳಿಗೆ ಕನಿಷ್ಠ ಸೌಲಭ್ಯ ನೀಡದ ಮಹರಾಷ್ಟ್ರ ಸರ್ಕಾರಕ್ಕೆ ಕ್ರೀಡಾಭಿಮಾನಿಗಳು ಛೀಮಾರಿ ಹಾಕಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.t