ಹೀರೋ ಥರಾ ಬಂದ.. ಕೊನೆಗೆ ಕಾಮಿಡಿ ಪೀಸ್ ಆದ..!

ಯುವಕನೊಬ್ಬ ತಾನೇ ಐನಾತಿ ಕಳ್ಳ ಅಂದ್ಕೊಂಡು ಚಿನ್ನದಂಗಡಿ ದರೋಡೆ ಮಾಡೋದಕ್ಕೆ ಹೋಗಿ, ಆಭರಣ ಸಮೇತ ಸಿಕ್ಕಿ ಬಿದ್ದಿದ್ದಾನೆ. ನವೆಂಬರ್​ 30ರಂದು ಈ ಘಟನೆ ನಡೆದಿದೆ.
ಏನಾಯ್ತು ಅಂದ್ರೆ, ಯುವಕನೊಬ್ಬ ಥಾಯ್ಲೆಂಡ್​ನಲ್ಲಿ ಸಾಮಾನ್ಯ ಗಿರಾಕಿಯಂತೆ ಆಭರಣದ ಅಂಗಡಿಗೆ ಹೋಗಿದ್ದಾನೆ. ಮೊದಲೇ ನಿರ್ಧರಿಸಿದ್ದಂತೆ ಚಿನ್ನದ ಚೈನ್​​ ಖರೀದಿಸುವಂತೆ ನಟಿಸುತ್ತಾ, ಅದನ್ನ ತನ್ನ ಕೊರಳಿಗೆ ಹಾಕಿಕೊಂಡು, ಇದು ತನಗೆ ಚೆನ್ನಾಗಿ ಕಾಣಿಸುತ್ತದಲ್ಲಾ ಎಂದು ಅಂಗಡಿಯವನನ್ನೇ ಕೇಳುತ್ತಾ, ಕ್ಷಣಾರ್ಧದಲ್ಲಿ ಆತನನ್ನು ಯಾಮಾರಿಸಿ, ಅಂಗಡಿಯಿಂದ ಪರಾರಿಯಾಗಲು ಬಾಗಿಲ ಬಳಿ ಬಂದಿದ್ದಾನೆ.
ಆದ್ರೆ, ಆ ಅಂಗಡಿಯವನಿಗೆ ಇವನ ಮೇಲೆ ಯಾಕೋ ಮೊದಲೇ ಗುಮಾನಿ ಬಂದುಬಿಟ್ಟಿತ್ತು ಅಂತ ಕಾಣಿಸುತ್ತದೆ. ಅಂಗಡಿಯ ಸ್ವಯಂಚಾಲಿತ ಗಾಜಿನ ಬಾಗಿಲನ್ನು ತಾನಿದ್ದ ಕಡೆಯಿಂದಲೇ ಲಾಕ್ ಮಾಡಿಬಿಟ್ಟಿದ್ದಾನೆ!
ಆ ಯುವಕನೋ ಬಾಗಿಲ ಬಳಿ ಬಂದು ಹೊರ ಓಡಲು ಯತ್ನಿಸಿದ್ದಾನೆ. ಆದ್ರೆ ಉಹುಃ ಎಷ್ಟು ಪ್ರಯತ್ನಿಸಿದರೂ ಬಾಗಿಲು ತೆರೆದುಕೊಂಡಿಲ್ಲ. ಆಗ ತಾನು ಲಾಕ್ ಆಗಿರುವುದು ಅವನಿಗೆ ಪಕ್ಕಾ ಆಗಿದೆ. ಇನ್ನೇನು ಮಾಡೋದು ಪೆಚ್ಚು ಮೋರೆ ಹಾಕಿಕೊಂಡ ಐನಾತಿ ಕಳ್ಳ, ತಾನು ಧರಿಸಿದ್ದ ಚಿನ್ನದ ಸರವನ್ನು ಕೊರಳಿಂದ ಬಿಚ್ಚುತ್ತಾ, ಅಂಗಡಿಯವನ ಕೈಗೆ ಕೊಟ್ಟು ಹುಳ್ಳಗೇ ನಕ್ಕಿದ್ದಾನೆ. ತಪ್ಪಾಯ್ತು ಅಂದಿದ್ದಾನೆ. ಆದ್ರೆ ಅಂಗಡಿಯವನು.. ಅದೆಲ್ಲ ಆಗೋಲ್ಲ, ನಿನ್ನನ್ನು ಕರೆದುಕೊಂಡು ಹೋಗಲು ಪೊಲೀಸರು ಬರುತ್ತಾರೆ, ಅವರ ಹತ್ತಿರ ನಿನ್ನ ಪ್ರವರ ಹೇಳಿಕೋ ಎಂದು ಪೊಲೀಸರಿಗೆ ಕರೆ ಕೊಟ್ಟಿದ್ದಾನೆ. ಪೊಲೀಸರು ಬಂದು ಯುವಕನನ್ನು ಸ್ಟೇಷನನ್ನಿಗೆ ಕರೆದೊಯ್ದಿದ್ದಾರೆ! ಯುವಕ ಅಂಗಡಿಯಲ್ಲಿ ಸೆರೆಯಾಗಿರುವುದು ಸಿಸಿಟಿವಿಯಲ್ಲಿಯೂ ಸೆರೆಯಾಗಿದೆ. ಆ ವಿಡಿಯೋ ಈಗ ವೈರಲ್​ ಆಗುತ್ತಿದೆ. ನೋಡಿದವರೆಲ್ಲಾ ಬಿದ್ದು ಬಿದ್ದು ನಗುತ್ತಿದ್ದಾರೆ.