ನಾನು ತೆರಿಗೆ ಕಟ್ಟದೇ ಇದ್ದಿದ್ದರೆ, ನನಗೆ ಯಾಕೆ ಬ್ಯಾಂಕಿನವರು ಲೋನ್ ಕೊಡ್ತಾ ಇದ್ರು?

ಬೆಂಗಳೂರು:  ಜನವರಿ 3ರಂದು ತಮ್ಮ ಮನೆ ಮೇಲೆ ನಡೆದಿದ್ದ ಐಟಿ ರೇಡ್​ಗೆ ಸಂಬಂಧಿಸಿದಂತೆ, ಇಂದು ಆದಾಯ ತೆರಿಗೆ ಇಲಾಖೆಗೆ ಭೇಟಿ ನೀಡಿದ್ದ ರಾಕಿಂಗ್ ಸ್ಟಾರ್ ಯಶ್ ವಿವರಣೆಯನ್ನು ನೀಡಿದ್ದಾರೆ. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಮೊದಲು ಅಧಿಕಾರಿಗಳು 8 ಅಥವಾ 9 ನೇ ತಾರೀಖಿನಂದು ಬರುವಂತೆ ಹೇಳಿದ್ದರು. ಆದ್ರೆ, ನನ್ನ ಹುಟ್ಟಿದ ಹಬ್ಬದ ನಿಮಿತ್ತ ನನಗೆ ಆಗ ಬರುವುದು ಕಷ್ಟವಾಗಬಹುದು, ಹೀಗಾಗಿ ನಾನು 10ನೇ ತಾರೀಖಿನಂದು ಬರ ಬಹುದಾ? ಎಂದು ವಿನಂತಿಸಿಕೊಂಡಿದ್ದೆ. ಅದಕ್ಕೆ ಅವರು 11ನೇ ತಾರೀಖು ಅಂದರೆ ಇಂದು ಬರುವಂತೆ ಸೂಚನೆ ನೀಡಿದ್ದರು. ಅದರಂತೆ ಇಂದು ಬಂದು ಅವರು ಕೇಳಿದ ವಿವರಣೆಗಳನ್ನು ನೀಡಿದ್ದೇನೆ ಅಂತಾ ಹೇಳಿದರು.

16-17 ಕೋಟಿ ಲೋನ್​ ಇದೆ ನನಗೆ..!
ಕೆಲವು ಕಡೆ ನನಗೆ 40ಕೋಟಿ ಲೋನ್​ ಇದೆ ಅನ್ನೋ ಸುದ್ದಿ ಹರಿದಾಡುತ್ತಿದೆ, ಆದ್ರೆ ನನಗೆ ಅಷ್ಟು ಹಣದ ಅವಶ್ಯಕತೆ ಏನು? ನಾನೇಕೆ ಅಷ್ಟು ಸಾಲ ಪಡೆಯಲಿ? ಎಂದು ಯಶ್ ಪ್ರಶ್ನಿಸಿದ್ದಾರೆ. ಅಲ್ಲದೇ, ನನಗೆ ಹೆಚ್ಚೆಂದರೆ 16 ರಿಂದ 17 ಕೋಟಿ ರೂಪಾಯಿಗಳಷ್ಟು ಸಾಲವಿದೆ. ಅಂದರೆ ನೀವೇ ಹೇಳಿ, ನಾನು ಸರಿಯಾಗಿ ಆದಾಯ ತೆರಿಗೆ ಪಾವತಿಸದೇ ಇದ್ದಿದ್ದರೆ ಇಷ್ಟು ಲೋನ್ ಸಿಗ್ತಾ ಇತ್ತಾ? ನಿಮ್ಮ ಇನ್​ಕಮ್ ಹಾಗೂ ಅದಕ್ಕೆ ಸಂಬಂಧಿಸಿದಂತೆ ತೆರಿಗೆ ಕಟ್ಟದೇ ಇದ್ದರೆ ಯಾವ ಬ್ಯಾಂಕಿನವರು ಸಾಲ ನೀಡುತ್ತಾರೆ? ಎಂದು ಕೂಡ ಪ್ರಶ್ನಿಸಿದರು.

ಅಲ್ಲದೇ, ಆದಾಯ ತೆರಿಗೆ ಇಲಾಖೆಗೆ ಅವರದ್ದೇ ಆದ ನಿಯಮಗಳು ಇವೆ. ಅಲ್ಲದೇ ಒಂದೇ ದಿನ ಸುಮಾರು 8 ಜನರ ಮೇಲೆ ದಾಳಿ ನಡೆದ ಹಿನ್ನೆಲೆ ಪ್ರಶ್ನೆಗಳೂ ಅಧಿಕವಾಗಿರುತ್ತವೆ. ಮತ್ತು ಈ ಪ್ರೊಸೆಸ್​ ಸುಮಾರು 2 ವರ್ಷಗಳ ಕಾಲ ನಡೆಯಬಹುದು ಅಂತಾ ಐಟಿ ಅಧಿಕಾರಿಗಳೇ ಹೇಳಿದ್ದಾರೆ ಅಂತಾ ಯಶ್ ತಿಳಿಸಿದ್ದಾರೆ.