ಅರಮನೆಯಲ್ಲಿ ಮರುಕಳಿಸಿದ ವೈಭವ, ಯದುವೀರ್ ರಾಜ​​ ದರ್ಬಾರ್..!​

ಮೈಸೂರು: ನಾಡಹಬ್ಬ ದಸರಾ ಉತ್ಸವಕ್ಕೆ ಇಂದು ಚಾಲನೆ ಸಿಕ್ಕಿದ್ದು, ನವರಾತ್ರಿ ಸಂಭ್ರಮ ಈಗಾಗಲೇ ಶುರುವಾಗಿದೆ. ಮೈಸೂರು ಅರಮನೆಯಲ್ಲಿ ಸಂಪ್ರದಾಯದಂತೆ ಇಂದು ಖಾಸಗಿ ದರ್ಬಾರ್​​ ನಡೆಯಿತು. ಪ್ರಜಾಪ್ರಭುತ್ವದ ನಡುವೆಯೂ ರಾಜಾಳ್ವಿಕೆಯ ಸಾಂಕೇತಿಕ ಸಂಪ್ರದಾಯವಾಗಿ ಖಾಸಗಿ ದರ್ಬಾರ್ ಮುಂದುವರಿಸಿಕೊಂಡು ಬರಲಾಗಿದೆ.

ಇಂದು ರಾಜ ಯದುವೀರ್​​ ಕೃಷ್ಣದತ್ತ ಚಾಮರಾಜ ಒಡೆಯರ್, ದರ್ಬಾರ್ ಹಾಲ್​​ನಲ್ಲಿ ಬೆಳ್ಳಿ ಕುರ್ಚಿಯ ಮೇಲೆ ಕುಳಿತು  ಕಳಶಗಳಿಗೆ ಪೂಜೆ ನೆರವೇರಿಸಿದರು. ಈ ವೇಳೆ ವಿದ್ವಾಂಸರಿಂದ ವೇದ-ಘೋಷಗಳು ಮೊಳಗಿದವು. ಖಾಸಗಿ ದರ್ಬಾರ್‌ಗೆ ಐತಿಹಾಸಿಕ ಮೈಸೂರು ಬ್ಯಾಂಡ್ ಹಿಮ್ಮೇಳ ಮತ್ತಷ್ಟು ರಂಗು ನೀಡಿತು. ಇನ್ನು ದಸರಾ ಉದ್ಘಾಟಿಸಿದ ಸುಧಾಮೂರ್ತಿ ಪೂಜಾ ಕೈಂಕರ್ಯಗಳ ವೀಕ್ಷಣೆ ಮಾಡಿದರು. ರಾಜಮಾತೆ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಪೂಜೆ ನೆರವೇರಿತು.

ಯದುವೀರ್ ಒಡೆಯರ್​ ರಾಜಪೋಷಾಕಿನಲ್ಲಿ ಕಂಗೊಳಿಸಿದರು. ತಿಳಿ ನೀಲಿ ಬಣ್ಣದ ಸಾಂಪ್ರದಾಯಿಕ ಮೈಸೂರು ಪೇಟ, ಗುಲಾಬಿ ವರ್ಣದ ನಿಲುವಂಗಿ ಹಾಗೂ ಪೈಜಾಮಾ ಧರಿಸಿದ್ದರು. ನಿಲುವಂಗಿಯ ಮೇಲೆ ಗಂಡಭೇರುಂಡ ರಾಜ ಲಾಂಛನ ರಾರಾಜಿಸುತ್ತಿತ್ತು. ಜೊತೆಗೆ ಮುತ್ತಿನ ಹಾರ, ಸ್ವರ್ಣ ಹಾರ, ಸ್ವರ್ಣ ತೋಳು ಬಂದಿ, ಮುತ್ತು ರತ್ನ ಖಚಿತ ಉಂಗುರಗಳನ್ನ ಯದುವೀರ್ ತೊಟ್ಟಿದ್ದರು.

ರತ್ನಖಚಿತ ಸಿಂಹಾಸನಕ್ಕೆ ಯದುವಂಶದ ಮಹಾರಾಜ ಯದುವೀರ್ ಪೂಜೆ ನೆರವೇರಿಸಿದರು. ಈ ವೇಳೆ ಅರಮನೆಯೊಳಗೆ ರಾಜ ವೈಭವ ಕಳೆಗಟ್ಟಿತ್ತು. ಯದುವೀರ್ ಒಡೆಯರ್​​ ಸಿಂಹಾಸನ ಆರೋಹಣ ಮಾಡುತ್ತಿದ್ದಂತೆ ವಂದಿ ಮಾಗದರಿಂದ ಜಯಘೋಷ ಮೊಳಗಿತು. ರಾಜಾಧಿರಾಜ, ರಾಜ ಮಾರ್ತಾಂಡ, ರಾಜ ಕುಲ ತಿಲಕ ಶ್ರೀಮನ್ ಮಹಾರಾಜ ಯದುವೀರ ಕೃಷ್ಣ ದತ್ತ ಭೂಪರಿಗೆ ಜಯಪರಾಕ್ ಹಾಗೂ ಇತ್ಯಾದಿ ಉದ್ಘೋಷಗಳನ್ನು ಹೊಗಳು ಭಟ್ಟರು ಸಾರಿದರು. ಖಾಸಗಿ ದರ್ಬಾರ್​​ನಲ್ಲಿ ಛತ್ರಿ, ಚಾಮರ, ಅಂಗರಕ್ಷಕರು, ಒಡ್ಡೋಲಗ ಸೇರಿದಂತೆ ಸಾಂಪ್ರದಾಯಿಕ ಸಮವಸ್ತ್ರ ಧರಿಸಿ ಅರಮನೆ ಸಿಬ್ಬಂದಿ  ಭಾಗಿಯಾಗಿದ್ರು.

ಸುಮಾರು 40 ನಿಮಿಷಗಳ ಕಾಲ ನಡೆದ ಸಾಂಪ್ರದಾಯಿಕ ದಸರಾ ಖಾಸಗಿ ದರ್ಬಾರ್ ಮುಕ್ತಾಯಗೊಂಡ ಬಳಿಕ, ಯದುವೀರ್ ಒಡೆಯರ್  ಹೊರನಡೆದರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv