ಮಾನವನಾಗಿ ಹುಟ್ಟಿದ್ಮೇಲೆ ಬೆಳಗಾವಿ ಸುತ್ತಮುತ್ತಲಿನ ಈ ಜಲಪಾತಗಳನ್ನ ನೋಡ್ಲೇಬೇಕು..!

ರಾಜ್ಯಾದ್ಯಂತ ಮುಂಗಾರಿನ ಅಬ್ಬರ ಶುರುವಾಗಿದೆ. ಇದುವರೆಗೆ ನೀರಿಲ್ಲದೇ ಒಣಗಿ ಹೋಗಿದ್ದ ಜಲಪಾತಗಳು ಮೈದುಂಬಿಕೊಂಡಿವೆ. ಅದರಲ್ಲೂ ಮಲೆನಾಡಿನ ಸೆರಗಿನಲ್ಲಿರುವ ಜಲಪಾತಗಳ ವೈಭವ ಕಣ್ತುಂಬಿಕೊಳ್ಳುವುದೇ ಸಂಭ್ರಮ. ಮಲೆನಾಡಿನ ಸೆರಗಿಗೆ ಹೊಂದಿಕೊಂಡಿರುವ ಬೆಳಗಾವಿ ಸುತ್ತಮುತ್ತಲಿನ ಜಲಪಾತಗಳು ಇದೀಗ ಎಲ್ಲರನ್ನ ಆಕರ್ಷಿಸುತ್ತಿದ್ದು, ಕಳೆದ ಒಂದು ವಾರದಿಂದ ಕುಟುಂಬ ಸಮೇತರಾಗಿ ಪ್ರವಾಸಿಗರು ಧುಮ್ಮಿಕ್ಕುವ ಜಲಪಾತಗಳ ಐಸಿರಿ ಕಣ್ತುಂಬಿ ಕೊಳ್ಳುತ್ತಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಬೆಳಗಾವಿ ಸುತ್ತಮುತ್ತಲಿನ ಜಲಪಾತಗಳ ಪರಿಚಯ ಇಲ್ಲಿದೆ ಓದಿ.

ಗೋಕಾಕ್ ಫಾಲ್ಸ್
ಗೋಕಾಕ್ ಜಲಪಾತ ಅಮೆರಿಕಾದ ನಯಾಗರ ಜಲಪಾತ ಹೋಲುವುದರಿಂದ ಇದನ್ನ ಭಾರತದ ನಯಾಗರ ಜಲಪಾತ ಅಂತಾ ಕರೆಯಲಾಗುತ್ತದೆ. ಅಷ್ಟೇ ಅಲ್ಲ ಇದಕ್ಕೆ ಕರ್ನಾಟಕದ ಎರಡನೇ ಅತಿ ದೊಡ್ಡ ಜಲಪಾತ ಎಂಬ ಹೆಗ್ಗಳಿಕೆಯೂ ಇದೆ. ಘಟಪ್ರಭಾ ನದಿಯಿಂದ ಉಂಟಾಗುವ ಈ ಜಲಪಾತ 180ಅಡಿ ಎತ್ತರದಿಂದ ಧುಮ್ಮಿಕುತ್ತದೆ. ಇದನ್ನ ನೋಡುವುದೇ ಒಂದು ಅದ್ಭುತ. ಇದರ ಜೊತೆಗೆ ಇಲ್ಲಿ ತೂಗು ಸೇತುವೆ ಇದ್ದು, ಇದರ ಮೇಲಿಂದ ನಿಂತು ಜಲಪಾತ ವೀಕ್ಷಣೆ ಮಾಡುವ ಅನುಭವವೇ ಬೇರೇ. ಸದ್ಯ ಮಳೆ ಬೀಳುತ್ತಿರುವುದರಿಂದ ಜಲಪಾತ ಮೈತುಂಬಿಕೊಂಡಿದ್ದು, ಪ್ರವಾಸಿಗರ ಹಾಟ್ ಸ್ಪಾಟ್ ಆಗಿದೆ. ಜೂನ್ ತಿಂಗಳಿಂದ ಡಿಸೆಂಬರ್ ವರಗೆ ಇಲ್ಲಿಗೆ ಭೇಟಿ ನೀಡಬಹುದು. ಬೆಳಗಾವಿ ಜಿಲ್ಲೆ ಗೋಕಾಕ್ ಪಟ್ಟಣದಿಂದ 6 ಕಿಲೋ ಮೀಟರ್ ಕ್ರಮಿಸಿದ್ರೆ ಸಾಕು ಗೋಕಾಕ್ ಜಲಪಾತ ಸಿಗುತ್ತದೆ. ಬೆಳಗಾವಿಯಿಂದ ನೇರವಾಗಿ ಗೋಕಾಕ್ ಗೆ ಬಸ್ ವ್ಯವಸ್ಥೆ ಇದೆ.

ಗೊಡಚಿನಮಲ್ಕಿ ಫಾಲ್ಸ್
ಗೋಕಾಕ್ ಫಾಲ್ಸ್ ನೋಡಿದವರು ಗೋಡಚಿನಮಲ್ಕಿ ಜಲಪಾತ ನೋಡಲೇಬೇಕು. ಗೋಕಾಕ್ ಫಾಲ್ಸ್ ನಿಂದ ಕೇವಲ 9 ಕಿಲೋ ಮೀಟರ್ ಕ್ರಮಿಸಿದ್ರೆ ಗೊಡಚಿನಮಲ್ಕಿ ಗ್ರಾಮ ಸಿಗುತ್ತದೆ. ಒಂದಿಷ್ಟು ಮುಂದೆ ಸಾಗಿ ವಾಹನ ಪಾರ್ಕ್ ಮಾಡಿ ಎರಡು ಕಿಲೋ ಮೀಟರ್ ಕಚ್ಚಾ ಹಾದಿಯಲ್ಲಿ ಕ್ರಮಿಸಿದ್ರೆ ಸಾಕು ಜಲಪಾತ ಸಿಗುತ್ತದೆ. ಇನ್ನೂ ಬಸ್ ಮೂಲಕ ಬರುವವರಿಗೂ ಗೋಡಚಿನಮಲ್ಕಿ ಗ್ರಾಮದವರೆಗೆ ಬಸ್ ವ್ಯವಸ್ಥೆಯೂ ಇದೆ. ಮಾರ್ಕಂಡಯ್ಯ ನದಿಯಿಂದ ಉಂಟಾಗುವ ನೈಸರ್ಗಿಕ ಜಲಪಾತದಲ್ಲಿ ಇದು ಒಂದು. ಒಂದು ವಾರದಿಂದ ಈ ಜಲಪಾತ ಮೈದುಂಬಿಕೊಂಡು ಹರಿಯುತ್ತಿದ್ದು, ತಂಡೋಪತಂಡವಾಗಿ ಪ್ರವಾಸಿಗರು ಆಗಮಿಸಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಸೊಗಲ ಜಲಪಾತ
ದಕ್ಷಿಣದ ಎರಡನೇ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀಕ್ಷೇತ್ರ ಸೊಗಲದಲ್ಲಿ ಒಂದು ಜಲಪಾತವಿದೆ. ಎಷ್ಟೇ ಬರಗಾಲವಿದ್ದರೂ ಈ ಜಲಪಾತದ ನೀರು ಕಡಿಮೆಯಾಗುವುದಿಲ್ಲ. ಇಲ್ಲಿನ ಬೆಟ್ಟಗಳ ನಡುವಿನಿಂದ ಪಾಽಕೃತಿಕವಾಗಿ ಹರಿಯುತ್ತದೆ. ಮೊದಲು 15ಅಡಿ ಎತ್ತರದಿಂದ ಧುಮ್ಮಕ್ಕಿ ನಂತರ 120ಅಡಿ ಎತ್ತರದಿಂದ ಜಲಧಾರೆಯಾಗಿ ಆಳಕ್ಕೆ ಬೀಳುತ್ತದೆ. ಇದರ ಕೆಳಗೆ ನಿಂತು ಸ್ನಾನ ಮಾಡಿದ್ರೆ ಒಳಿತಾಗುತ್ತದೆ. ಪಾಪ ತೊಳೆದು ಹೋಗುತ್ತದೆ ಎನ್ನುವ ನಂಬಿಕೆ ಹಿಂದಿನಿಂದಲ್ಲೂ ಇದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದಿಂದ 16ಕಿಲೋ ಮೀಟರ್ ದೂರದಲ್ಲಿ ಈ ಜಲಪಾತವಿದೆ. ಇನ್ನೂ ಸವದತ್ತಿ ಪಟ್ಟಣದಿಂದ 35ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿಗೆ ಹೋಗಲು ಬೆಳಗಾವಿ, ಸವದತ್ತಿ, ಬೈಲಹೊಂಗಲ ಪಟ್ಟಣದಿಂದ ಬಸ್ ವ್ಯವಸ್ಥೆ ಇದೆ.

ಸುರಲ್ ಫಾಲ್ಸ್
ಇನ್ನೂ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಹಲವು ಜಲಪಾತಗಳು ಬರುತ್ತವೆ. ಅವುಗಳಲ್ಲಿ ಸುರಲ್ ಫಾಲ್ಸ್ ಒಂದು. ಗೋವಾ-ಮಹಾರಾಷ್ಟ್ರ-ಕರ್ನಾಟಕದ ಗಡಿಯಲ್ಲಿ ಬರುವ ಈ ಫಾಲ್ಸ್ ದಟ್ಟ ಅರಣ್ಯದಲ್ಲಿದೆ. ಕರ್ನಾಟಕದಿಂದ ಗೋವಾಗೆ ತೆರಳುವ ಮಾರ್ಗ ಮಧ್ಯೆ ಸುರಲ್ ಗ್ರಾಮದ ಬಳಿ ಈ ಜಲಪಾತವಿದೆ. ನೈಸರ್ಗಿಕವಾಗಿ ನಿರ್ಮಾಣವಾಗಿರುವ ಜಲಪಾತಗಳಲ್ಲಿ ಈ ಸುರಲ್ ಜಲಪಾತ ಅತ್ಯದ್ಭುತ. 300 ಅಡಿ ಆಳದಿಂದ ಹಾಲಿನಂತೆ ನೀರು ಬೀಳುವುದನ್ನ ಕಣ್ತುಂಬಿಕೊಳ್ಳುವುದೇ ಹಬ್ಬ. ಸದ್ಯ ಮಳೆಯಾಗು ತ್ತಿರುವುದರಿಂದ ಜಲಪಾತ ಮೈದುಂಬಿ ಹರಿಯುತ್ತಿದೆ. ಇಲ್ಲಿಗೆ ಗೋವಾಕ್ಕೆ ತೆರಳುವ ಬಸ್ ಮೂಲಕವೂ ಇಲ್ಲಿಗೆ ಹೋಗಬಹುದು.

ವಜ್ರಾ ಫಾಲ್ಸ್
ಇದು ಕರ್ನಾಟಕದ ಖಾನಾಪೂರದ ಪಶ್ಚಿಮಘಟ್ಟ ಅರಣ್ಯಪ್ರದೇಶದಲ್ಲಿರುವ ಜಲಪಾತ. ಇಲ್ಲಿಗೆ ನೇರವಾಗಿ ಹೋಗಲು ಯಾವುದೇ ರಸ್ತೆಗಳಿಲ್ಲ. ದಟ್ಟಕಾಡಿನ ನಡುವೆ ಅರಣ್ಯ ಸಿಬ್ಬಂದಿಯ ಸಹಾಯದೊಂದಿಗೆ 8.5ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಹೋದ್ರೆ ಜಲಪಾತ ವೀಕ್ಷಿಸಬಹುದು. ಮಹಾದಾಯಿ ನದಿಯಿಂದ ಉಂಟಾಗಿರುವ ಈ ಜಲಪಾತ, ಖಾನಾಪೂರ ತಾಲೂಕಿನ ಗವಾಳಿ ಹಾಗೂ ಚಾಪೋಲಿ ಗ್ರಾಮದ ನಡುವೆ ಬರುತ್ತದೆ. 660 ಅಡಿ ಎತ್ತರದಿಂದ ಬೀಳುವ ಜಲಪಾತವನ್ನ ಕಣ್ತುಂಬಿಕೊಳ್ಳುವುದೇ ಅದ್ಬುತ. ಇಲ್ಲಿ ತೆರಳಲು ಅರಣ್ಯ ಇಲಾಖೆಯ ಪರವಾನಿಗೆ ಕಡ್ಡಾಯವಾಗಿದೆ. ಇಲ್ಲಿಗೆ ಹೋಗಲು ಬಸ್,ಇತರೆ ವ್ಯವಸ್ಥೆ ಇಲ್ಲ. ಕಾಲ್ನಡಿಗೆಯಲ್ಲಿಯೇ ಹೋಗಬೇಕು.

ದೂಧ್‌ಸಾಗರ್‌ ಪಾಲ್ಸ್
ದೂಧ್‌ಸಾಗರ್‌ ಜಲಪಾತ ಕರ್ನಾಟಕ, ಗೋವಾ, ಮಹಾರಾಷ್ಟ್ರ ಮಧ್ಯದಲ್ಲಿ ಬರುವ ಅದ್ಭುತ ಜಲಪಾತ. ಮಳೆಗಾಲ ಸಂದರ್ಭದಲ್ಲಿ ಹಾಲಿನ ನೊರೆಯಂತೆ ಬೀಳುವ ನೀರನ್ನ ಕಣ್ತುಂಬಿಕೊಳ್ಳುವುದೇ ಒಂದು ವೈಭೋಗ. ಮಹಾದಾಯಿ ನದಿಯಿಂದ ಉದ್ಭವವಾಗಿರುವ ಈ ಜಲಪಾತ ದಟ್ಟ ಪಶ್ಚಿಮಘಟ್ಟ ಅರಣ್ಯದಲ್ಲಿದೆ. ಈ ಜಲಾಶಯ ಬೆಳಗಾವಿಯಿಂದ 98ಕಿಲೋ ಮೀಟರ್ ದೂರ ಇದ್ರೆ, ಅತ್ತ ಗೋವಾದ ಪಣಜಿಯಿಂದ 60ಕಿಲೋ ಮೀಟರ್ ದೂರ. ಇಲ್ಲಿಗೆ ಹೋಗಲು ಬಸ್ ವ್ಯವಸ್ಥೆ ಇಲ್ಲ. ಸರಿಯಾಗಿ ರೈಲು ವ್ಯವಸ್ಥೆಯೂ ಇಲ್ಲ. ಬೆಳಗಾವಿಯಿಂದ ಲೋಂಡಾ, ಲೋಂಡಾದಿಂದ ಮಡಗಾಂವ್ ಮೂಲಕ ರೈಲಿನಲ್ಲಿ ಹೋಗುವಾಗ ಇದು ಕಾಣುತ್ತದೆ. ಮಂಡಗಾವ್ ಇಲ್ಲವೆ ದೂದ್ ಸಾಗರ ರೈಲು ನಿಲ್ದಾಣದಲ್ಲಿ ಇಳಿದುಕೊಂಡು ಕಾಲ್ನಡಿಗೆಯಲ್ಲಿ ಹೋಗಿ ಜಲಪಾತ ವೀಕ್ಷಿಸಬಹುದಾಗಿದೆ. ಇತ್ತೀಚಿಗೆ ಇಲ್ಲಿ ಅಪರಾಧ ಪ್ರಕರಣ ಜಾಸ್ತಿಯಾಗುತ್ತಿದ್ದಂತೆಯೇ ರೈಲ್ವೇ ಇಲಾಖೆ ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರಿದೆ.

ಚಿಕಲೆ ಪಾಲ್ಸ್
ಬೆಳಗಾವಿ ನಗರದಿಂದ ಕೇವಲ 44ಕಿಲೋ ಮೀಟರ್ ಕ್ರಮಿಸಿದ್ರೆ ಸಾಕು ಚಿಕಲೆ ಫಾಲ್ಸ್ ಸಿಗುತ್ತದೆ. ಖಾನಾಪೂರ ತಾಲೂಕಿನ ಚಿಕಲೆ ಎನ್ನುವ ಗ್ರಾಮದ ಬಳಿ ಈ ಜಲಪಾತವಿದೆ. ನೈಸರ್ಗಿಕವಾಗಿ ನಿರ್ಮಾಣವಾಗಿರುವ ಈ ಜಲಪಾತ ನೋಡುವುದೇ ಒಂದು ಹಬ್ಬ. ಆದ್ರೆ ಈ ಜಲಪಾತಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲ. ಇದರ ಬಗ್ಗೆ ಯಾವುದೇ ಮಾಹಿತಿಯೂ ಸಿಗೋದಿಲ್ಲ. ಇದು ಪಶ್ಚಿಮಘಟ್ಟದ ದಟ್ಟ ಅರಣ್ಯದಲ್ಲಿ ಬರುವುದರಿಂದ ಜನರು ಇಲ್ಲಿಗೆ ಹೋಗುವುದು ವಿರಳ. ಜೊತೆಗೆ ಕಾಡುಪ್ರಾಣಿಗಳ ಹಾವಳಿ ಇರುವುದರಿಂದ ಅರಣ್ಯ ಇಲಾಖೆ ಜನರನ್ನ ಇಲ್ಲಿಗೆ ಬಿಡುವುದಿಲ್ಲ.

ಅಂಬೋಲಿ ಫಾಲ್ಸ್
ಬೆಳಗಾವಿಯಿಂದ ಕೇವಲ 75ಕಿಲೋ ಮೀಟರ್ ಕ್ರಮಿಸಿದ್ರೆ ಸಾಕು ಅಂಬೋಲಿ ಫಾಲ್ಸ್ ಸಿಗುತ್ತದೆ. ಪಕ್ಕದ ಮಹಾರಾಷ್ಟ್ರ ಸಿಂಧದುರ್ಗ ತಾಲೂಕಿನಲ್ಲಿ ಬರುವ ಈ ಜಲಪಾತ,ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಅಂಬೋಲಿ ಅತ್ಯಂತ ಸುರಕ್ಷಿತ ಹಾಗೂ ಪ್ರಶಾಂತ ಜಲಪಾತ ಎಂದು ಹೆಸರುವಾಸಿಯಾಗಿದೆ. ಮುಂಗಾರು ಮಳೆ ಆರಂಭವಾಗಿರುವುದರಿಂದ ಸದ್ಯ ಈ ಜಲಪಾತ ಮೈತುಂಬಿಕೊಂಡು ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಸದ್ಯ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬಂದು ಪ್ರಕೃತಿ ಹಾಗೂ ಜಲಪಾತದಲ್ಲಿ ಮಿಂದು ಆನಂದ ಪಡೆಯುತ್ತಿದ್ದಾರೆ. ಇಲ್ಲಿಗೆ ಬೆಳಗಾವಿಯಿಂದ ಅಂಬೋಲಿಗೆ ಬಸ್ ಸಂಚಾರವಿದೆ. ಅಷ್ಟೇ ಅಲ್ಲ ಇಲ್ಲಿಗೆ ಹೋಗಲು ಉತ್ತಮ ರಸ್ತೆ ಇರುವುದರಿಂದ ಪ್ರವಾಸಿಗರು ಮಳೆಗಾಲದಲ್ಲಿ ಇಲ್ಲಿಗೆ ಹೋಗಿ ಖುಷಿಪಡಬಹುದು. ಇಷ್ಟೇ ಅಲ್ಲ ಬೆಳಗಾವಿ ಸುತ್ತಮುತ್ತ ಹಲವು ಜಲಪಾತಗಳಿದ್ದು, ಅವುಗಳನ್ನ ನೋಡುವುದಕ್ಕಾಗಿ ಪ್ರವಾಸಿಗರು ಬೆಳಗಾವಿಯತ್ತ ಬರುತ್ತಿದ್ದಾರೆ. ಮತ್ತೇಕೆ ತಡ..? ನೀವು ಒಮ್ಮೆ ಕುಟುಂಬ ಸಮೇತರಾಗಿ ಈ ಜಲಪಾತಗಳಿಗೆ ಭೇಟಿ ನೀಡಿ ಆನಂದ ಪಡಿ.

ವಿಶೇಷ ವರದಿ: ಶ್ರೀಕಾಂತ ಕುಬಕಡ್ಡಿ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv