ಅಯ್ಯಪ್ಪ ಭಕ್ತರ ಕೋಪಕ್ಕೆ ಹೆದರಿ ಇನ್ನೂ ಮನೆ ಸೇರದ ಮಹಿಳೆಯರು!

ಕೊಚ್ಚಿ: ಶಬರಿಮಲೆ ಪ್ರವೇಶ ಮಾಡಿ ಶತಮಾನದ ಸಂಪ್ರದಾಯಕ್ಕೆ ಇತಿಶ್ರೀ ಹಾಡಿದ್ದ ಇಬ್ಬರು ಮಹಿಳೆಯರು ಮನೆಗೆ ಹಿಂದಿರುಗಲು ಸಾಧ್ಯವಾಗಿಲ್ಲ. ಸುಪ್ರೀಂಕೋರ್ಟ್‌ ತೀರ್ಪು ಹೊರಬಿದ್ದ ಮೇಲೆ ಬಿಂದು ಅಮ್ಮಿನಿ ಮತ್ತು ಕನಕದುರ್ಗಾ ಅನ್ನೋ ಮಹಿಳೆಯರು ಮಣಿಕಂಠನ ಸನ್ನಿಧಿಗೆ ಎಂಟ್ರಿ ಕೊಟ್ಟಿದ್ದರು. ಇದು ಅಯ್ಯಪ್ಪ ಭಕ್ತರ ವಿರೋಧಕ್ಕೆ ಕಾರಣವಾಗಿತ್ತು. ಇನ್ನೊಂದೆಡೆ ಅಯ್ಯಪ್ಪನ ಸನ್ನಿಧಿಗೆ ಎಂಟ್ರಿ ನೀಡಿದ್ದನ್ನ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಾಗಿ ಬಿಂದು ಮತ್ತು ಕನಕದುರ್ಗಾ ಇದುವರೆಗೂ ಮನೆಗೆ ಹಿಂದಿರುಗಲು ಸಾಧ್ಯವಾಗಿಲ್ಲ. ಅಯ್ಯಪ್ಪನ ಭಕ್ತರಿಂದ ಇವರಿಗೆ ಜೀವ ಬೆದರಿಕೆ ಇದೆ ಅಂತಾ ಇನ್ನೂ ಅಜ್ಞಾತ ಸ್ಥಳದಲ್ಲೇ ಇದ್ದಾರೆ. ಈ ಬಗ್ಗೆ ದೇಗುಲ ಪ್ರವೇಶಿಸಿದ್ದ ಬಿಂದು ಪ್ರತಿಕ್ರಿಯಿಸಿದ್ದು, ದೇಗುಲ ಪ್ರವೇಶ ಮಾಡಿದ್ದರಿಂದ ನಮಗೆ ಯಾವುದೇ ಭಯವಿಲ್ಲ. ನಮ್ಮ ಗುರಿಯನ್ನು ನಾವು ಮುಟ್ಟಿದ್ದೇವೆ. ಅಂದುಕೊಂಡ ಹಾಗೆ ದೇಗುಲವನ್ನು ಪ್ರವೇಶಿಸಿದ್ದೇವೆ. ನನಗೆ ನಮ್ಮ ಪೊಲೀಸ್ ಇಲಾಖೆ, ಕೇರಳ ಸರ್ಕಾರ, ಪ್ರಜಾಪ್ರಭುತ್ವ ಸಮಾಜದ ಮೇಲೆ ನಂಬಿಕೆ ಇದೆ ಎಂದಿದ್ದಾರೆ. ನಮ್ಮನ್ನ ಪೊಲೀಸರು, ನಮ್ಮ ಕೆಲ ಸ್ನೇಹಿತರು ನಾವು ದೇಗುಲ ಪ್ರವೇಶಿಸಬಾರದು ಅಂತಾ ಹೇಳಿದ್ದರು. ಕಾರಣ ನಾವು ಅನೇಕ ಸಮಸ್ಯೆಗಳು, ಜೀವಬೆದರಿಕೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸಲಹೆ ನೀಡಿದ್ದರು. ಈಗ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.