ಕಳ್ಳರು ಲಾಂಗ್​ ತೋರಿಸಿದ್ರೂ ಬೆದರಲಿಲ್ಲ ಈ ಧೈರ್ಯವಂತೆ ಮಹಿಳೆ!

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಮನೆಗಳ್ಳರ ಹಾವಳಿ ಮಿತಿ ಮೀರಿದೆ. ಮೊದಲೆಲ್ಲಾ ಒಂಟಿ ಮಹಿಳೆಯರ ಮನೆಯನ್ನೇ ಟಾರ್ಗೆಟ್​ ಮಾಡ್ತಿದ್ದ ಖದೀಮರು ಈಗ ಯಾವ ಮನೆಗಳನ್ನೂ ಬಿಡುತ್ತಿಲ್ಲ. ಆದ್ರೆ, ನಿನ್ನೆ ತಡರಾತ್ರಿ ಬಾಗಿಲು ಹೊಡೆದು ಮನೆಗೆ ನುಗ್ಗಲು ಪ್ರಯತ್ನಿಸಿದ ಖದೀಮರಿಗೆ ಮಹಿಳೆಯೊಬ್ಬರು ಪಾಠ ಕಲಿಸಿದ್ದಾರೆ. ನಗರದ ಹೊರವಲಯದಲ್ಲಿರುವ ಬೇಗೂರು ಬಳಿ ಈ ಘಟನೆ ನಡೆದಿದೆ. ನಿನ್ನೆ ತಡರಾತ್ರಿ 6 ಜನ ಖದೀಮರ ತಂಡ ಮನೆಯೊಂದಕ್ಕೆ ನುಗ್ಗಲು ಯತ್ನಿಸುತ್ತಿದ್ದರು. ಈ ವೇಳೆ ಖದೀಮರು ಬಾಗಿಲು ಹೊಡೆಯುವ ಶಬ್ದ ಕೇಳಿ ಎಚ್ಚರಗೊಂಡ ಮನೆಯೊಡತಿ ರೂಪ, ಬಾಗಿಲು ಹೊಡೆಯುವುದನ್ನು ತಡೆಯಲು ಮನೆಯೊಳಗಿನಿಂದಲೇ ಕೂಗಿ ಕಳ್ಳರನ್ನು ಬೆದರಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಲಾಂಗ್​ ತೋರಿಸಿ ಆಕೆಯನ್ನು ಹೆದರಿಸಲು ಪ್ರಯತ್ನಿಸಿದ್ದಾರೆ. ಆದ್ರೂ ಧೈರ್ಯ ಕಳೆದುಕೊಳ್ಳದ ರೂಪ, ಕೂಗಾಡಿ ಖದೀಮರನ್ನೇ ಬೆದರಿಸಿದ್ದಾರೆ. ಅಲ್ಲದೇ 6-7 ಬಾರಿ ಪೊಲೀಸ್​ ಠಾಣೆಗೆ ಕರೆ ಮಾಡಿದ್ದಾರೆ. ಕೊನೆಗೂ ಕರೆ ಸ್ವೀಕರಿಸಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ರು. ಈ ವೇಳೆ ಹೊಯ್ಸಳ ವಾಹನದ ಶಬ್ದ ಕೇಳಿದ ಕೂಡಲೇ ದರೋಡೆಕೋರರು ಪರಾರಿಯಾಗಿದ್ದಾರೆ. ಅಕ್ಟೋಬರ್ 8ರ ಬೆಳಗ್ಗಿನಜಾವ 3:30 ರಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv