ಬ್ಯಾಗೇಜ್​ ಚಾರ್ಜ್​​ ಉಳಿಸೋಕೆ 4 ಕೆ.ಜಿ ತೂಕದಷ್ಟು ಬಟ್ಟೆಗಳನ್ನ ಧರಿಸಿ ವಿಮಾನವೇರಿದಳು

ವಿಮಾನಗಳಲ್ಲಿ ಲಗೇಜ್​ ತೂಕ ಇಂತಿಷ್ಟೇ ಇರಬೇಕು ಅನ್ನೋ ನಿಯಮವಿರೋದ್ರಿಂದ ಪ್ರಯಾಣಿಕರು ಸಾಧ್ಯವಾದಷ್ಟು ಹೆಚ್ಚು ಸಾಮಗ್ರಿಗಳನ್ನ ಪ್ಯಾಕ್ ಮಾಡೋದಿಲ್ಲ. ಹಾಗೆ ಮಾಡಿದ್ರೂ ಹೆಚ್ಚಿನ ಬ್ಯಾಗೇಜ್​ ಚಾರ್ಜ್​​ ಕಟ್ಟಬೇಕಾಗುತ್ತದೆ. ಇಲ್ಲೊಬ್ಬರು ಮಹಿಳೆ ಆ ಬ್ಯಾಗೇಜ್​ ಚಾರ್ಜ್​ ಉಳಿಸೋಕೆ 4 ಕೆ.ಜಿ ತೂಕದಷ್ಟು ಬಟ್ಟೆಯನ್ನ ತನ್ನ ಮೈಮೇಲೆ ಧರಿಸಿಕೊಂಡು ವಿಮಾನವೇರಿದ್ದಾರೆ.

ಹೌದು, ನಟಾಲಿಯಾ ವಿನ್​ ಎಂಬಾಕೆ ಮ್ಯಾನ್​​ಚೆಸ್ಟರ್​​ನಿಂದ ಫುರ್ಟಿವೆಂಟುರಾಗೆ ಪ್ರವಾಸಕ್ಕೆ ಹೊರಟಿದ್ದರು. ವಿಮಾನದಲ್ಲಿ 6 ಕೆಜಿಯಷ್ಟು ಲಗೇಜ್​​​ ಹೊತ್ತೊಯ್ಯಲು ಮಾತ್ರ ಅವಕಾಶವಿತ್ತು. ಆದ್ರೆ ನಟಾಲಿಯಾ ಅವರ ಲಗೇಜ್ 9.4 ಕೆಜಿ ತೂಕವಿತ್ತು. ಅಂದ್ರೆ ನಿಯಮಕ್ಕಿಂತ ಸುಮಾರು 4 ಕೆಜಿಯಷ್ಟು ಹೆಚ್ಚು ತೂಕವಿತ್ತು. ಹೀಗಾಗಿ ಭದ್ರತಾ ಸಿಬ್ಬಂದಿ ನಟಾಲಿಯಾರನ್ನ ತಡೆದು, ಎಕ್ಸ್​​ಟ್ರಾ ಬ್ಯಾಗೇಜ್​ ಚಾರ್ಜ್​ಗೆಂದು 65 ಪೌಂಡ್ಸ್​( ಅಂದಾಜು ₹5,800) ಹಣ ಕೊಡುವಂತೆ ಕೇಳಿದ್ದರು.

ಹಣ ಕೊಡಲು ಒಪ್ಪದ ನಟಾಲಿಯಾ ತನ್ನ ಬ್ಯಾಗ್​​ನಲ್ಲಿದ್ದ ಹೆಚ್ಚುವರಿ ಬಟ್ಟೆಗಳನ್ನ ಧರಿಸಿ ವಿಮಾನವೇರಲು ನಿರ್ಧರಿಸಿದ್ರಂತೆ. ಅದರಂತೆ 7 ಡ್ರೆಸ್​​, ಎರಡು ಜೊತೆ ಶೂಗಳು, ಎರಡು ಜೊತೆ ಶಾರ್ಟ್ಸ್​​, ಒಂದು ಸ್ಕರ್ಟ್​​ ಹಾಗೂ ಕಾರ್ಡಿಗನ್ ಧರಿಸಿದ್ದಾರೆ. ತನ್ನ ಲಗೇಜ್​ ತೆಗೆದುಕೊಂಡು ಹೋಗಲು ನಟಾಲಿಯಾ ಇಷ್ಟೆಲ್ಲ ಮಾಡಿದ್ದನ್ನು ನೋಡಿ, ಸಹಪ್ರಯಾಣಿಕರು ಆಕೆಯ ಕೆಲವು ಬಟ್ಟೆಗಳನ್ನು ತಮ್ಮ ಬ್ಯಾಗ್​ನಲ್ಲಿ ಇಡುವಂತೆ ಆಫರ್​ ಕೂಡ ಮಾಡಿದ್ರಂತೆ.

ತನ್ನ ಈ ಸ್ಥಿತಿ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರೋ ನಟಾಲಿಯಾ, ಅಷ್ಟೊಂದು ಬಟ್ಟೆ ಧರಿಸಿ ನಾನು ಅಕ್ಷರಶಃ ಕುದಿಯುತ್ತಿದ್ದೆ ಎಂದಿದ್ದಾರೆ. ವರದಿಗಳ ಪ್ರಕಾರ ನಟಾಲಿಯಾ ಅವರ ಅಕೌಂಟ್​​ನಲ್ಲಿ 60 ಪೌಂಡ್ಸ್​ ಹಣ ಇತ್ತು. ಇದನ್ನು ಆಕೆ ತನ್ನ ಪ್ರವಾಸದ ವೇಳೆ ಖರ್ಚು ಮಾಡಲು ಇಟ್ಟುಕೊಂಡಿದ್ದರು. ಹೀಗಾಗಿ ಅಷ್ಟೂ ಹಣವನ್ನ ಬ್ಯಾಗೇಜ್ ಶುಲ್ಕವಾಗಿ ಕಟ್ಟಲು ಅವರು ಸಿದ್ಧರಿರಲಿಲ್ಲ. ಹೀಗಾಗಿ ಬಟ್ಟೆಗಳನ್ನ ತಾನೇ ತೊಡಲು ನಿರ್ಧರಿಸಿದ್ರು ಎನ್ನಲಾಗಿದೆ. ನಟಾಲಿಯಾ ಅವರ ಸ್ನೇಹಿತೆಯೊಬ್ಬರ ಲಗೇಜ್​ ಸ್ಥಿತಿಯೂ ಹೀಗೇ ಇದ್ದ ಕಾರಣ ನಟಾಲಿಯಾ ಮಾಡಿದ್ದನ್ನ ಆಕೆಯೂ ಅನುಸರಿಸಿದ್ದಾರೆ.

ನಟಾಲಿಯಾ ವಿಮಾನವೇರಿದ ಬಳಿಕ ಆಕೆ ಎಕ್ಸ್​​ಟ್ರಾ ಬಟ್ಟೆಗಳನ್ನ ತೆಗೆದಿಡಬಹುದು ಎಂದು ಗಗನಸಖಿಯೊಬ್ಬರು ಹೇಳಿದ್ದಾರೆ. ಅದರಂತೆ ನಟಾಲಿಯಾ ಬಟ್ಟೆಗಳನ್ನ ತೆಗೆದಿಡುವಾಗ ಇತರೆ ಪ್ರಯಾಣಿಕರು ಸಿಕ್ಕಾಪಟ್ಟೆ ನಕ್ಕಿದ್ರಂತೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv