ಪೋಷಕರ ಮದುವೆ ಒತ್ತಡಕ್ಕೆ ತನ್ನನ್ನು ತಾನೇ ಮದುವೆಯಾದಳು ಯುವತಿ..!

ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟ. ಬಹುತೇಕ ಪೋಷಕರು ಬೆಳೆದು ನಿಂತ ಹೆಣ್ಣು ಮಕ್ಕಳನ್ನು ಧಾರೆ ಎರೆದು ಕೊಟ್ಟರೇ ಸಾಕು ಎಂದುಕೊಳ್ಳುತ್ತಾರೆ. ಅವರ ಆ ಅಭಿಪ್ರಾಯದಲ್ಲಿ ಮಕ್ಕಳ  ಬದುಕಿನ ಬಂಡಿ ಸರಾಗವಾಗಿ ಸಾಗಲಿ ಎನ್ನುವ ಇರಾದೆ ಇರುತ್ತದೆ. ಕೆಲವರ ಮನೆಯಲ್ಲಿ ಮದುವೆ ಆಗು, ಮದುವೆ ಆಗು ಎಂದು ಒತ್ತಡ ಹೇರುತ್ತಿರುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳಾದರೇ ಮುಗಿದೇ ಹೋಯಿತು. ಬೇಗ ಮದುವೆಯಾಗು ಎನ್ನುತ್ತಾರೆ. ಆ ಒತ್ತಡದಿಂದಾಗಿ ಕೆಲವರು ಬೇಸತ್ತು ಹೋಗಿರುತ್ತಾರೆ. ಇಲ್ಲೊಬ್ಬ ಯುವತಿ ಪಾಲಕರ ಒತ್ತಡಕ್ಕೆ ಬೇಸತ್ತು ಮದುವೆಗೆ ಒಪ್ಪಿಕೊಂಡಿದ್ದಾಳೆ. ಆದರೆ ಪುರುಷನೊಂದಿಗೆ ಮದುವೆಯಲ್ಲ, ಬದಲಿಗೆ ತನ್ನನ್ನು ತಾನೇ ಮದುವೆಯಾಗಿದ್ದಾಳೆ!

ಆಕ್ಸ್​​ಫರ್ಡ್​ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ, ಉಗಾಂಡ ಮೂಲದ ಲುಲು ಜೆಮಿಮಾ(32) ಆಗಸ್ಟ್​ 27 ರಂದು ತನ್ನ ಅಣಕು ಮದುವೆಯನ್ನು ಏರ್ಪಡಿಸಿದ್ದಳು. ಮದುವೆ ನಿಗದಿಯಾಗಿದ್ದ ಸ್ಥಳಕ್ಕೆ ವೆಡ್ಡಿಂಗ್​​ ಗೌನ್​​​ನಲ್ಲಿ  ಹೋಗಿದ್ದಳು. ಅಲ್ಲದೆ ರೂಢಿಯಂತೆ ಮದುವೆಯಲ್ಲಿ ಸ್ಪೀಚ್ ಕೂಡ ಕೊಟ್ಟಳು. ಈ ವೇಳೆ ಆಕೆ ವರ ಸಿಗದಿರುವ ಕುರಿತು ಅತಿಥಿಗಳಿಗೆ ವಿವರಣೆ ನೀಡಿದಳು.

ಜೆಮಿಮಾಳ ಪೋಷಕರು ಮದುವೆಗೆ ಬಂದಿರಲಿಲ್ಲ. ಆದರೆ ಸಮಾರಂಭದ ಬಳಿಕ ಲುಲು ತನ್ನ ತಾಯಿ ಜೊತೆ ಮಾತನಾಡಿ ಆಕೆಗೆ ವಿಷಯವನ್ನು ವಿವರಿಸಿದ್ದಾಳೆ. ನಾವು ಮರುದಿನ ಮಾತನಾಡಿದಾಗ ನನ್ನ ತಾಯಿ ಸ್ವಲ್ಪ ಗೊಂದಲಕ್ಕೊಳಗಾಗಿದ್ದರು. ಸ್ವಲ್ಪ ನೋವಾದಂತೆ ಮಾತನಾಡುತ್ತಿದ್ದರು, ಆದರೆ ವಿವಾಹದ ಉಡುಪನ್ನು ಧರಿಸುವುದರ ಮೂಲಕ ನಾನು ಮದುವೆಗೆ ಸಿದ್ಧವಾಗಿದ್ದನೆಂದು ವಿವರಿಸಿದೆ ಎಂದು ಲುಲು ಹೇಳುತ್ತಾಳೆ.

ನಾನು 16 ವರ್ಷದವಳಿದ್ದಾಗಲೇ ನನ್ನ ತಂದೆ ಮದುವೆಯ ಭಾಷಣವನ್ನು ಬರೆದಿದ್ದರು. ಪ್ರತಿ ಜನ್ಮದಿನದಂದು ನನ್ನ ತಾಯಿ ನನಗೆ ಒಳ್ಳೆಯ ಗಂಡ ಸಿಗಲೆಂದು ಪ್ರಾರ್ಥಿಸುತ್ತಿದ್ದಳು. ನನ್ನ 32ನೇ ಹುಟ್ಟುಹಬ್ಬದಂದು ನನ್ನನ್ನು ನಾನೇ ಮದುವೆಯಾಗುವ ಮೂಲಕ ಅವರನ್ನು ಸುಲಭವಾಗಿ ಸಮಾಧಾನ ಮಾಡಲು ನಿರ್ಧರಿಸಿದೆನು ಎಂದು ಲುಲು ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾಳೆ.

ಇನ್ನು ಲುಲು ಮದುವೆಗೆ ಖರ್ಚಾಗಿದ್ದು ಎಷ್ಟು ಅಂತೀರಾ? ಕೇವಲ 2.62 ಡಾಲರ್( ಅಂದಾಜು ₹194 ) ಅದೂ ಆಕೆ ಮದುವೆಯ ಸ್ಥಳಕ್ಕೆ ಹೋಗಲು ಖರ್ಚು ಮಾಡಿದ ಟ್ರಾವೆಲಿಂಗ್​ ಚಾರ್ಜಸ್​ ಅಷ್ಟೇ. ಲುಲುಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಆಕೆಯ ಸ್ನೇಹಿತೆ ವೆಡ್ಡಿಂಗ್​ ಗೌನ್​ ತರಿಸಿದ್ದಳು. ಲುಲು ಅಣ್ಣ ಮದುವೆಗೆ ಕೇಕ್​ ತಯಾರಿದ್ದರು. ಇನ್ನು ಬಾರ್​ವೊಂದರಲ್ಲಿ ಈ ಮದುವೆ ನಡೆದಿದ್ದು, ಅಲ್ಲಿಗೆ ಬಂದಿದ್ದ ಅತಿಥಿಗಳು ತಮ್ಮ ಊಟದ ಬಿಲ್ ತಾವೇ ಭರಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv