ನಕ್ಸಲ್​ ಪೀಡಿತ ಪ್ರದೇಶದ ಮಹಿಳೆ UPSCಯಲ್ಲಿ 12ನೇ ಱಂಕ್​..!

ನವದೆಹಲಿ: ನಕ್ಸಲ್‌ ಪೀಡಿತ ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯ 25 ವರ್ಷದ ಮಹಿಳೆಯೊಬ್ಬರು ಯುಪಿಎಸ್​ಸಿ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 12ನೇ ಱಂಕ್​ ಬಂದಿದ್ದಾರೆ. ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ಇತ್ತೀಚೆಗೆ ಫಲಿತಾಂಶ ಪ್ರಕಟಿಸಿದ್ದು, ದಾಂತೇವಾಡದ ಗೀದಮ್‌ ಪಟ್ಟಣದ ನಮ್ರತಾ ಜೈನ್​ ಈ ಸಾಧನೆ ಮಾಡಿದ್ದಾರೆ. 2016ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 99ನೇ ಱಂಕ್​ ಪಡೆದಿದ್ದ ನಮ್ರತಾ, ಐಪಿಎಸ್‌ಗೆ ಅರ್ಹತೆ ಪಡೆದಿದ್ದರು. ಸದ್ಯ ಹೈದರಾಬಾದ್‌ನ ಸರ್ದಾರ್​​ ವಲ್ಲಭಭಾಯಿ ಪಟೇಲ್​ ರಾಷ್ಟ್ರೀಯ ಪೊಲೀಸ್​​ ಅಕಾಡೆಮಿಯಲ್ಲಿ ನಮ್ರತಾ ತರಬೇತಿ ಪಡೆಯುತ್ತಿದ್ದಾರೆ. ನಾನು 8ನೇ ತರಗತಿಯಲ್ಲಿದ್ದಾಗ ಮಹಿಳಾ ಅಧಿಕಾರಿಯೊಬ್ಬರು ನನ್ನ ಶಾಲೆಗೆ ಬಂದಿದ್ದರು. ಅವರು ಜಿಲ್ಲಾಧಿಕಾರಿ ಎಂದು ತಿಳಿದು, ಅವರಿಂದ ಪ್ರಭಾವಿತಳಾಗಿದ್ದೆ. ನಾನೂ ಜಿಲ್ಲಾಧಿಕಾರಿಯಾಗಬೇಕು ಎಂದು ಅಂದೇ ನಿರ್ಧರಿಸಿದ್ದೆ ಎಂದು ನಮ್ರತಾ ತಮ್ಮ ಕನಸನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ಹಲವು ವರ್ಷಗಳ ಹಿಂದೆ ನನ್ನ ಪಟ್ಟಣದಲ್ಲಿಯೇ ಪೊಲೀಸ್​ ಠಾಣೆಯನ್ನು ನಕ್ಸಲರು ಸ್ಫೋಟಿಸಿದ್ದರು. ಬಡವರ ಸೇವೆ ಹಾಗೂ ಅವರ ಅಭಿವೃದ್ಧಿಗೆ ಕೆಲಸ ಮಾಡಬೇಕೆಂಬ ನನ್ನ ಆಸೆಗೆ ಈ ಘಟನೆಯೇ ಪ್ರೋತ್ಸಾಹ ನೀಡಿತು. ದಾಂತೇವಾಡದಲ್ಲಿ ನಕ್ಸಲ್​ ನಿರ್ಮೂಲನೆ ಮಾಡಲು ಶಿಕ್ಷಣದ ಮೂಲಕ ಅಭಿವೃದ್ಧಿ ಮಾಡುವ ಅಗತ್ಯವಿದೆ ಎಂದಿದ್ದಾರೆ ನಮ್ರತಾ. ಜೊತೆಗೆ ಈ ಬಾರಿ ಸಾರ್ವಜನಿಕ ಆಡಳಿತ ಸೇವೆಗೆ ಅರ್ಹತೆ ಸಿಗಲಿದೆ ಎಂಬ ವಿಶ್ವಾಸದಲ್ಲಿಯೂ ಇದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv