ಫ್ಯಾನ್ಸಿಗೆ ಅಂತ ತಂದಿದ್ದ ಉಂಗುರ ಕೋಟಿ ಕೋಟಿ ಹಣ ತಂದು ಕೊಡ್ತು..!

ಲಂಡನ್: ಹೆಣ್ಮಕ್ಕಳಿಗೆ ಚಿನ್ನ, ಬೆಳ್ಳಿ, ವಜ್ರ ಅಂದ್ರೆ ಪ್ರಾಣ ಅಂತಾರೆ. ಇದನ್ನ ಹೆಣ್ಣುಮಕ್ಕಳನ್ನ ರೇಗಿಸೋಕೆಂದೇ ಹೇಳ್ತಾರೋ..? ಅಥವಾ ನಿಜವಾಗಿಯೂ ಅವರಿಗೆ ಚಿನ್ನ, ಬೆಳ್ಳಿಯ ಆಭರಣಗಳು ಇಷ್ಟವೋ..? ಆಪತ್ಕಾಲಕ್ಕೆ ಆಗುತ್ತೆ ಅಂತ ಮುಂದಾಲೋಚನೆಯಿಂದಲೇ ಕೊಂಡುಕೊಳ್ತಾರೋ..? ಒಟ್ನಲ್ಲಿ ಆಭರಣಗಳ ಮೋಜು ಮಾತ್ರ ಲೇಡೀಸ್​ಗೆ ಸ್ವಲ್ಪ ಹೆಚ್ಚೆ. ಚಿನ್ನ, ಬೆಳ್ಳಿ, ವಜ್ರ ಸಿಗದಿದ್ರೆ, ಇತ್ತೀಚಿಗಂತೂ ಫ್ಯಾಷನ್ ರಿಂಗ್ಸ್, ಚೈನ್ ಎಲ್ಲಾ ಬಂದಿದೆ. ಕೆಲವರು ಸ್ಟೀಲ್​ನಿಂದ ಮಾಡಿದ ಉಂಗುರವನ್ನ ಹಾಕಿಕೊಂಡ್ರೆ, ಇನ್ನು ಕೆಲವರು ಪ್ಲಾಸ್ಟಿಕ್ ಆದ್ರೂ ಪರ್ವಾಗಿಲ್ಲ, ಡಿಫರೆಂಟ್ ಆಗಿರುತ್ತೆ ಅಂತ ಅದನ್ನೂ ಹಾಕ್ಕೊಳ್ತಾರೆ.

ಇದೇ ರೀತಿ ಲಂಡನ್​ನಲ್ಲಿ ಒಬ್ಬ ಮಹಿಳೆ ತಂದಿದ್ದ ಗಾಜಿನ ಉಂಗುರ ಈಗ ಆಕೆಗೆ ಕೋಟಿ ಕೋಟಿ ಹಣವನ್ನ ತಂದು ಕೊಟ್ಟಿದೆ. ಈ ಉಂಗುರದ ಕಥೆ ಇಂದು ನಿನ್ನೆಯದ್ದಲ್ಲ. ಬರೋಬ್ಬರಿ 3 ದಶಕಗಳ ಹಿಂದಿನ ಸ್ಟೋರಿ. 30 ವರ್ಷದ ಹಿಂದೆ, ಡೆಬ್ರಾ ಗಡಾರ್ಡ್ ಅನ್ನೋ ಮಹಿಳೆ ಜಸ್ಟ್ 10 ಪೌಂಡ್​ಗೆ ಅಂದ್ರೆ 925 ರೂಪಾಯಿ ಕೊಟ್ಟು ಗಾಜಿನ ಹರಳಿರುವ ಉಂಗುರವೊಂದನ್ನ ಕೊಂಡು ತಂದಿದ್ದರು. ಕೆಲ ವರ್ಷಗಳ ಕಾಲ ಅದನ್ನ ತಮ್ಮ ಬೆರಳಿಗೆ ಹಾಕಿಕೊಂಡಿದ್ದ ಡೆಬ್ರಾ ನಂತರ ತೆಗೆದು, ಭದ್ರವಾಗಿ ತಮ್ಮ ಜ್ಯುವೆಲರಿ ಬಾಕ್ಸ್​​ನಲ್ಲಿ ಜೋಪಾನ ಮಾಡಿಟ್ಟಿದ್ದರು. ಈಗಾಗಲೇ ಆ ಉಂಗುರ ಡಬ್ಬಿ ಸೇರಿ 15 ವರ್ಷಗಳೇ ಕಳೆದು ಹೋಗಿದೆ.

ಆದ್ರೆ ಇತ್ತೀಚಿಗೆ ಡೆಬ್ರಾರ ತಾಯಿ ತಮ್ಮ ಬಳಿ ಇದ್ದ ಹಣವನ್ನೆಲ್ಲಾ ಕಳೆದುಕೊಂಡಿದ್ದರು. ಕಳ್ಳರು ಇದ್ದ ಬದ್ದದ್ದನ್ನೆಲ್ಲಾ ದೋಚಿದ್ದರಿಂದ ಡೆಬ್ರಾ ತಮ್ಮ ಬಳಿ ಇದ್ದ ಈ ಪ್ಲಾಸ್ಟಿಕ್ ಉಂಗುರವನ್ನೇ ಮಾರೋಣ, ಇದರಿಂದ ಅಮ್ಮನಿಗೆ ಒಂಚೂರಾದ್ರೂ ಹೆಲ್ಪ್ ಆಗುತ್ತೆ ಅಂತ ಆಭರಣದ ಅಂಗಡಿಗೆ ಹೋಗಿದ್ದಾರೆ. ಡೆಬ್ರಾ ನೀಡಿದ ಉಂಗರುವನ್ನ ಪರೀಕ್ಷಿಸಿದ ಅಂಗಡಿಯವರೇ ಶಾಕ್ ಆಗಿದ್ದಾರೆ. ನೀವು ತಂದಿರೋದು ಪ್ಲಾಸ್ಟಿಕ್ ಉಂಗುರ ಅಲ್ಲ ಮೇಡಮ್ ಇದು ಅಸಲಿ 26.27 ಕ್ಯಾರೆಟ್​ನ ವಜ್ರ ಅಂತ ಹೇಳಿದ್ದಾರೆ. ಇದನ್ನ ಕೇಳಿ ಡೆಬ್ರಾ ಕೂಡ ಆಶ್ಚರ್ಯ ಚಕಿತರಾಗಿದ್ದಾರೆ. ವಾಪಸ್ ಮನೆಗೆ ತೆಗೆದುಕೊಂಡು ಹೋಗಿ, ಇದನ್ನೇನು ಮಾಡೋದು ಅಂತ ಇಡೀ ರಾತ್ರಿ ಅದನ್ನೇ ನೋಡ್ತಾ ಕೂತಿದ್ದರಂತೆ.

ಕಡೆಗೆ ಈ ವಜ್ರದುಂಗುರವನ್ನ ಹರಾಜು ಹಾಕಲು ನಿರ್ಧರಿಸಿದ ಡೆಬ್ರಾ ಸಾತ್​ಬೀಸ್ ಹರಾಜು ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಇದೀಗ ಉಂಗುರ ಹರಾಜಾಗಿದ್ದು, ಆಕ್ಷನ್ ಕಾಸ್ಟ್ ತೆಗೆದ ಬಳಿಕ ಡೆಬ್ರಾಗೆ ಬರೊಬ್ಬರಿ 6.8 ಕೋಟಿ ರೂಪಾಯಿಯನ್ನ ತಂದುಕೊಟ್ಟಿದೆ. ಈ ಹಣ ಬರ್ತಿದ್ದಂತೆ ತನ್ನ ತಾಯಿಯ ಕಷ್ಟವನ್ನ ತೀರಿಸಿರುವ ಡೆಬ್ರಾ, ಅಮ್ಮನಿಗೆ ಸಾಕಷ್ಟು ಗಿಫ್ಟ್​ಗಳನ್ನೂ ಕೊಂಡುಕೊಂಡಿದ್ದಾರಂತೆ. ಜೊತೆಗೆ ತಮಗಾಗಿ ಒಂದು ವಿಂಟೇಜ್ ಜ್ಯುವೆಲರಿ ಕಂಪನಿಯನ್ನೂ ತೆರೆದಿದ್ದಾರೆ. ಇದೀಗ ವಜ್ರದುಂಗುರ ಹರಾಜು ಹಾಕಿದ ಮೇಲೆ ಬಂದ ಹಣದಿಂದ ಡೆಬ್ರಾರ ಕುಟುಂಬ ನೆಮ್ಮದಿಯ ಜೀವನ ನಡೆಸ್ತಿದೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv