ಅಪೌಷ್ಟಿಕ ಮಕ್ಕಳನ್ನು ಬಳಸಿ ಭಿಕ್ಷಾಟನೆ: ನಾಲ್ವರ ಬಂಧನ

ಕಲಬುರ್ಗಿ: ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಇಟ್ಟುಕೊಂಡು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯರ ವಿರುದ್ಧ ಕಲಬುರ್ಗಿ ನಗರ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

ಉತ್ತರಪ್ರದೇಶದ ಸಾಂಬಾಲ್​ ಜಿಲ್ಲೆಯ ರೂಬಿ, ರೈಯಿಸಾ ಎಂಬವರು ಮಕ್ಕಳನ್ನು ಇಟ್ಟುಕೊಂಡು ಭಿಕ್ಷಾಟನೆ ಮಾಡುತ್ತಿದ್ದರು. ತಳ್ಳುವ ಬಂಡಿಯಂತಿರುವ ಗಾಲಿಯ ಡಬ್ಬಾದಲ್ಲಿ ಅಪೌಷ್ಟಿಕರಾಗಿದ್ದ ಇಬ್ಬರು ಮಕ್ಕಳು ಕುಳಿತುಕೊಳ್ಳುತ್ತಿದ್ದರು. ರಸ್ತೆಯಲ್ಲಿ ಮಕ್ಕಳನ್ನು ಇಟ್ಟುಕೊಂಡು ಹುಸೇನಿ ಗಾರ್ಡನ್​​​ ಪ್ರದೇಶದಲ್ಲಿ ಕಳೆದ ಗುರುವಾರ ಭಿಕ್ಷಾಟನೆ ಮಾಡುತ್ತಿದ್ದರು. ಭಿಕ್ಷಾಟನೆ ಮಾಡಿದ ಹಣದಲ್ಲಿ ತಮಗೆ ಆಶ್ರಯ ನೀಡಿದ ಬಶೀರ್​ ಎಂಬಾತನಿಗೂ ಸಹ ನೀಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಸ್ಥಳೀಯ ನಾಗರಿಕರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದರು.
ಸಾರ್ವಜನಿಕರ ಮಾಹಿತಿ ಆಧರಿಸಿ, ಮಕ್ಕಳ ಸಹಾಯವಾಣಿ, ಡಾನ್ ಬಾಸ್ಕೋ ಸಂಸ್ಥೆಯ ಫಾದರ್ ಸಜಿತ್ ಜಾರ್ಜ್​ ಮತ್ತು ಸಂಸ್ಕಾರ ಪ್ರತಿಷ್ಠಾನದ ವಿಠ್ಠಲ್ ಚಿಕಣಿ ತಂಡ ಸ್ಥಳಕ್ಕೆ ಆಗಮಿಸಿ ಮಕ್ಕಳನ್ನು‌ ರಕ್ಷಿಸಿದೆ. ಇನ್ನೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳನ್ನು ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಆಶ್ರಯ ನೀಡಿದ್ದ ಬಶೀರ್​ ಆಲಂ ಹಾಗೂ ಫರೀದ್​ ಎಂಬವರ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv