ಕರೆಂಟ್​ ಹೊಡೆದ ಕೋತಿಗೆ ಪ್ರೀತಿಯ ಅಮ್ಮನಾದ ಎಎಸ್ಐ..!

ಕಲಬುರ್ಗಿ: ನಗರದ ಜಗತ್ ವೃತ್ತದಲ್ಲಿ ಕರೆಂಟ್ ಶಾಕ್ ನಿಂದ ನರಳುತ್ತಿದ್ದ ಕೋತಿಯೊಂದನ್ನು ರಕ್ಷಿಸುವ ಮೂಲಕ ಕಲಬುರ್ಗಿ ಡಿಸಿಐಬಿ ಘಟಕದ ಮಹಿಳಾ ಎಎಸ್‌ಐ ಮಾನವೀಯತೆ ಮೆರೆದಿದ್ದಾರೆ. ಎಎಸ್‌ಐ ಯಶೋದಾ ಕಟ್ಟೆ ಮೊನ್ನೆ ಜಗತ್ ವೃತ್ತದ ಮೂಲಕ ದೇವಸ್ಥಾನಕ್ಕೆ ಹೋಗುತ್ತಿದ್ದರು. ಈ ವೇಳೆ ಯಲ್ಲಮ್ಮ ದೇವಸ್ಥಾನದ ಬಳಿ ಕೋತಿಯೊಂದು ಕರೆಂಟ್ ಶಾಕ್ ಹೊಡೆದು ನಡುರಸ್ತೆಯಲ್ಲಿ ನರಳಾಡುತ್ತಿತ್ತು. ನೆರೆದಿದ್ದ ಜನರು ನಿಂತು ನೋಡುತ್ತಿದ್ದರೆ ವಿನಃ ಯಾರೊಬ್ಬರೂ ಮುಂದೆ ಬಂದು ಕೋತಿಯನ್ನ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಕಾರ್ಯಕ್ಕೆ ಮುಂದಾಗಿರಲಿಲ್ಲ. ಈ ವೇಳೆ ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಎಎಸ್‌ಐ ಯಶೋದಾ, ಕೋತಿಯನ್ನ ಚೀಲವೊಂದರಲ್ಲಿ ಎತ್ತಿಕೊಂಡು ಹೋಗಿ ಮನೆಯಲ್ಲಿ ಪ್ರಾಥಮಿಕ‌ ಚಿಕಿತ್ಸೆ ಕೊಟ್ಟಿದ್ದಾರೆ. ಬಳಿಕ ಆ ಕೋತಿಯನ್ನ ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಗ್ಲೋಕೊಸ್ ಹಾಕಿಸಿದ್ದಾರೆ. ಸದ್ಯ ಈ ಕೋತಿ ಸಂಪೂರ್ಣ ಗುಣಮುಖವಾಗಿದ್ದು, ಎಎಸ್‌ಐ ಯಶೋದಾ ಅವರ ಮನೆಯಲ್ಲಿ ನಲಿದಾಡುತ್ತಿದೆ.

ಯಶೋದಾರನ್ನ ಕಂಡ ತಕ್ಷಣ ಕೋತಿ, ಅವರನ್ನ ಮುದ್ದಾಡೋದು, ಅವರ ಮೇಲೆ ಹೋಗಿ ಕುಳಿತುಕೊಳ್ಳೋದು ಮಾಡುತ್ತಿದೆ. ಅದು ಬಯಸುವಂತೆ ಮಾವಿನಕಾಯಿ ಇನ್ನಿತರ ತಿಂಡಿ‌ ತಿನಿಸುಗಳನ್ನು ಕೋತಿಗೆ ನೀಡಿ ಆರೈಕೆ ಮಾಡುತ್ತಿದ್ದಾರೆ. ಆದರೆ ಆ ಕೋತಿ ಯಶೋದರನ್ನ ಬಿಟ್ಟು ಒಂದು ಕ್ಷಣ ಇರುತ್ತಿಲ್ಲ. ಅದನ್ನ ಪ್ರಾಣಿ ಸಂಗ್ರಹಾಲಯಕ್ಕೆ ಬಿಡುವ ಯೋಚನೆ ಯಶೋದರದ್ದು. ಆದರೆ ಅದು ಪ್ರಾಣಿ ಸಂಗ್ರಹಾಲಯದಲ್ಲಿ ಇರಲು ನಿರಾಕರಿಸಿದರೆ ನಾವೇ ಸಾಕ್ತೇವೆ ಅಂತಾರೆ. ಸದ್ಯ ಯಶೋದಾರ ಈ ಕಾರ್ಯಕ್ಕೆ ಕಲಬುರ್ಗಿ ಎಸ್​ಪಿ‌ ಎನ್. ಶಶಿಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv