ಚಳಿ ಚಳಿ ತಾಳೆನು ಈ ಚಳಿಯ, ಇವುಗಳನು ತಿನ್ನಲು ತಾರೋ ಓ ಇನಿಯ..!

ಚುಮು ಚುಮು ಚಳಿಯಲ್ಲಿ ಬೆಚ್ಚನೆ ಬೆಡ್​ಶೀಟ್ ಹೊದ್ದುಕೊಂಡು ಮಲಗಿದ್ರೆ ಸ್ವರ್ಗಕ್ಕೆ ಮೂರೇ ಗೇಣು..! ಸಕ್ಕರೆ ನಿದ್ದೆಯಿಂದ ಹೊರಬರಲು ಮನಸು ಕೇಳುವುದೇ ಇಲ್ಲ. ಚಳಿಗಾಲ ಮನಸ್ಸಿನ ಆರೋಗ್ಯಕ್ಕೆ ಮಾತ್ರವಲ್ಲದೇ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಸಹ ಬಹಳ ಸಹಕಾರಿ. ಆದ್ರೆ, ಈ ಕಾಲದಲ್ಲಿ, ಆಗಾಗ ಉಷ್ಣತೆಯಲ್ಲಿ ಹೆಚ್ಚು ಕಡಿಮೆಯಾಗುವುದರಿಂದ ಯಾವ ಸಮಯದಲ್ಲಿ ಯಾವ ಆಹಾರ ಸೇವಿಸುವುದು ಅಂತ ಗೊಂದಲವುಂಟಾಗುತ್ತದೆ. ಅಲ್ಲದೇ ಚಳಿಗಾಲದಲ್ಲಿ ದೇಹವು ನಿರ್ಜಲೀಕರಣಗೊಳ್ಳುವುದರಿಂದ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ನಿಮ್ಮ ಅಡುಗೆ ಮನೆಯಲ್ಲಿ ಇರೋ ಆಹಾರ ಪದಾರ್ಥಗಳನ್ನೇ ಉಪಯೋಗಿಸಿ ಚಳಿಗಾಲದಲ್ಲಿ ಬರುವ ದೇಹದ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.

ಯಾವ್ಯಾವ ಆಹಾರಗಳು ಚಳಿಗಾಲದಲ್ಲಿ ಉತ್ತಮ…?

1. ಅರಿಶಿಣ
ಅರಿಶಿಣದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಚಳಿಗಾಲದಲ್ಲಿ ಬರುವ ರೋಗಗಳನ್ನ ತಡೆಯಲು ಉತ್ತಮ ಆಹಾರವಾಗಿದೆ. ದೇಹದಲ್ಲಿ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡಿ ದೇಹ ಬೆಚ್ಚಗಿರಲು ಸಹಕರಿಸುತ್ತದೆ. ಬಿಸಿ ಹಾಲಿಗೆ ಅರಿಶಿಣ ಬೆರೆಸಿ ದಿನನಿತ್ಯ ಕುಡಿದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

2. ಶುಂಠಿ
ಮನೆಮದ್ದುಗಳ ಪೈಕಿ ತಕ್ಷಣ ನೆನಪಿಗೆ ಬರೋದೇ ಶುಂಠಿ. ಮನೆಯಲ್ಲಿ ಯಾರಿಗಾದ್ರೂ ನೆಗಡಿ, ಶೀತ ಶುರುವಾಯ್ತು ಅಂದ್ರೆ ಮನೆಯ ಹಿರಿಯರು ಶುಂಠಿ ಕಷಾಯ ಕುಡಿಯುವಂತೆ ಸಲಹೆ ನೀಡುತ್ತಾರೆ. ಶುಂಠಿಯಲ್ಲಿ ದೇಹದ ತಾಪಮಾನವನ್ನ ಬೆಚ್ಚಗರಿಸುವ ಅಂಶವಿದೆ. ಹೀಗಾಗಿ ಚಳಿಗಾಲದಲ್ಲಿ ಬರುವ ರೋಗಗಳಿಗೆ ಶುಂಠಿ ಉತ್ತಮ ಮದ್ದು.

3. ಜೇನುತುಪ್ಪ
ಎಕ್ಸ್​ಪೈರಿ ಡೇಟ್​ ಇಲ್ಲದೇ ಇರೋ ಕೆಲವೇ ಕೆಲವು ಆಹಾರ ಪದಾರ್ಥಗಳಲ್ಲಿ ಜೇನುತುಪ್ಪ ಕೂಡ ಒಂದು. ಹೀಗಾಗಿ ಜೇನುತುಪ್ಪವನ್ನ ಎಷ್ಟು ದಿನದವರೆಗೆ ಬೇಕಾದ್ರೂ ನೀವು ಸಂಗ್ರಹಿಸಿ ಇಡಬಹುದು. ಚಳಿಗಾಲದ ಕೆಮ್ಮು ಹಾಗೂ ಜ್ವರವನ್ನ ಎದುರಿಸುವಲ್ಲಿ ಜೇನುತುಪ್ಪ ಸಹಕಾರಿ.

4. ದಾಲ್ಚಿನ್ನಿ
ದಾಲ್ಚಿನ್ನಿ ಅಡುಗೆಯ ಘಮ ಹೆಚ್ಚಿಸುವುದು ಮಾತ್ರವಲ್ಲದೇ ದೇಹವನ್ನು ಬೆಚ್ಚಗಿರಿಸಿ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ. ಅಲ್ಲದೇ ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ. ದಾಲ್ಚಿನ್ನಿ ಪುಡಿಯನ್ನ ನೀವು ದಿನನಿತ್ಯ ತಯಾರಿಸುವ ಮಿಲ್ಕ್ ಶೇಕ್ ಅಥವಾ ಕಾಫಿಗೆ ಬೆರೆಸಿ ಕೂಡ ಕುಡಿಯಬಹುದು.

5. ಎಳ್ಳು
ನ್ಯುಮೋನಿಯಾ, ಬ್ರಾಂಕೈಟಿಸ್ ಮತ್ತು ಆಸ್ತಮಾದಂತಹ ದೀರ್ಘಕಾಲದ ಕಾಯಿಲೆಗಳನ್ನು ಎದುರಿಸಲು ಎಳ್ಳು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ತಲೆಹೊಟ್ಟು, ಕೂದಲು ಉದುರುವಿಕೆ ಅಧಿಕವಾಗಿರುವುದರಿಂದ ಎಳ್ಳನ್ನು ಅರೆದು ತಲೆ ಕೂದಲಿಗೆ ಹಚ್ಚಿಕೊಂಡರೆ ಈ ಸಮಸ್ಯೆಗಳು ಕೂಡಾ ಕಡಿಮೆಯಾಗುತ್ತವೆ.

6. ಡ್ರೈ ಫ್ರೂಟ್ಸ್​
ಸೀಮಿತ ಪ್ರಮಾಣದಲ್ಲಿ ಡ್ರೈ ಫ್ರೂಟ್ಸ್​ ಸೇವಿಸುವುದರಿಂದ ದೇಹದಲ್ಲಿ ಶಾಖ ಉತ್ಪತ್ತಿಯಾಗುವುದಲ್ಲದೇ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ. ರಕ್ತಹೀನತೆ, ವಿಟಮಿನ್​ಗಳ ಕೊರತೆಯಿಂದ ಬಳಲುತ್ತಿರುವವರು ಡ್ರೈ ಫ್ರೂಟ್ಸ್ ಸೇವಿಸಬೇಕು.

7. ಕೇಸರಿ
ಸಿಹಿ ಪದಾರ್ಥಗಳನ್ನು ತಯಾರಿಸುವಾಗ ಬಳಸುವ ಕೇಸರಿ ರುಚಿಯನ್ನಷ್ಟೇ ಅಲ್ಲದೇ ಆರೋಗ್ಯವನ್ನೂ ವೃದ್ಧಿಸುತ್ತದೆ. ತುಸು ದುಬಾರಿ ಎನಿಸಿದರೂ ಆರೋಗ್ಯದ ದೃಷ್ಟಿಯಿಂದ ಕೇಸರಿ ತುಂಬಾ ಒಳ್ಳೆಯದು. ಚರ್ಮದ ಹೊಳಪನ್ನು ಹೆಚ್ಚಿಸಿ ಚರ್ಮಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುವಲ್ಲಿ ಕೇಸರಿ ಪ್ರಮುಖ ಪಾತ್ರ ವಹಿಸುತ್ತದೆ. ರಾಯಲ್ ಮಸಾಲೆ ಪದಾರ್ಥಗಳಲ್ಲಿ ಒಂದಾದ ಕೇಸರಿಯ ಕೆಲವು ದಳಗಳನ್ನ ಹಾಲಿಗೆ ಬೆರೆಸಿ ಕುಡಿಯಬಹುದು.

8. ಮೊಟ್ಟೆ
ವಿಟಮಿನ್ಸ್ ಹಾಗೂ ಪ್ರೋಟೀನ್​ಗಳ ಆಗರವಾಗಿರುವ ಮೊಟ್ಟೆಗಳು ಚಳಿಗಾಲದಲ್ಲಿ ಹರಡುವ ಸೋಂಕುಗಳಿಂದ ರಕ್ಷಣೆ ನೀಡುವುದಲ್ಲದೇ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಪೂರೈಸುವಲ್ಲಿ ಸಹಕಾರಿಯಾಗಿವೆ.

9. ಕರಿಮೆಣಸು
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇರಿಸುವಲ್ಲಿ ಕಪ್ಪು ಅಥವಾ ಬಿಳಿಮೆಣಸು ಸಹಾಯ ಮಾಡುತ್ತವೆ. ಕರಿಮೆಣಸಿನಲ್ಲಿ ಌಂಟಿಆಕ್ಸಿಡಂಟ್ಸ್ ಅಧಿಕವಾಗಿದ್ದು, ಜ್ವರ, ನೆಗಡಿ, ಕೆಮ್ಮನ್ನು ನಿವಾರಿಸುತ್ತವೆ.

10. ಹಾಟ್ ಸೂಪ್
ಚಳಿಗಾಲದಲ್ಲಿ ಬಿಸಿ ಬಿಸಿಯಾಗಿ ಏನಾದ್ರೂ ತಿನ್ಬೇಕು, ಕುಡೀಬೇಕು ಅನ್ಸೋದು ಸಾಮಾನ್ಯ. ಆದ್ರೆ, ಈ ಕಾಲದಲ್ಲಿ ದೇಹ ಬಹಳ ಸೆನ್ಸಿಟಿವ್ ಆಗಿ ಇರುವುದರಿಂದ ಬೇಕು ಅನ್ನಿಸಿದ್ದೆಲ್ಲಾ ಸೇವಿಸಲು ಆಗುವುದಿಲ್ಲ. ಹೀಗಾಗಿ ಬಿಸಿ ಬಿಸಿ ಸೂಪ್ ಬೆಸ್ಟ್ ಆಪ್ಷನ್. ಸೂಪ್​ನಲ್ಲಿ ಮೇಲೆ ತಿಳಿಸಿರುವ ಹಲವು ಪದಾರ್ಥಗಳನ್ನ ಬಳಸಲಾಗುತ್ತದೆ. ಇದರಿಂದ ಆರೋಗ್ಯ ಚೆನ್ನಾಗಿರುವುದರ ಜೊತೆಗೆ ಹೊಟ್ಟೆಯೂ ತುಂಬುತ್ತದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv