ಶಿರೂರುಶ್ರೀಗಳಿಗೆ ಎದುರಾಗಿದೆ ಪೀಠ ತ್ಯಾಗ ಮಾಡುವ ಸಂಕಷ್ಟ..!

ಉಡುಪಿಯ ಅಷ್ಟಮಠಗಳ ಪೈಕಿ ಯಾವಾಗಲೂ ಸುದ್ದಿಗೆ ಗ್ರಾಸವಾಗೋದು ಶಿರೂರು ಮಠ. ಈಗ ಇದೇ ಮಠ ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗಿದೆ. ಅಲ್ಲದೇ, ಶಿರೂರು ಮಠದ ಪೀಠಾಧಿಪತಿ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಗಳಿಗೆ ಸಂಕಷ್ಟ ಎದುರಾಗಿದೆ. ಯಾವುದೋ ಸಂದರ್ಭದಲ್ಲಿ ಮಾತನಾಡಿದ ಸ್ಫೋಟಕ ವಿಚಾರಗಳು ಅವರಿಗೆ ಮುಳುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಅಲ್ಲದೇ, ಲಕ್ಷ್ಮೀವರ ಸ್ವಾಮಿಗಳು ಪೀಠ ತ್ಯಾಗ ಮಾಡುವ ಅನಿವಾರ್ಯತೆಯೂ ಎದುರಾಗಿದೆ.

ಶಿರೂರುಆಡಿಯೋ ಹಿಂದಿರೋ ವಿಷಯವೇನು?

ಉಡುಪಿಯ ಅಷ್ಟಮಠಗಳ ಪೈಕಿ ಶಿರೂರು ಮಠವು ಒಂದು. ಇತ್ತೀಚಿಗೆ ಶಿರೂರು ಮಠದ ಪೀಠಾಧಿಪತಿ ಶ್ರೀಲಕ್ಷ್ಮೀವರ ಸ್ವಾಮಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ರು. ಅದೇ ಸಂದರ್ಭದಲ್ಲಿ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ‘ನಮಗೆ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸ ದೀಕ್ಷೆ ನೀಡಿದ್ರು. ವಯಸ್ಕರಾದ ಬಳಿಕ ಸನ್ಯಾಸ ದೀಕ್ಷೆ ನೀಡಿದ್ರೆ ಪರವಾಗಿಲ್ಲ. ಆದ್ರೆ, ವಯಸ್ಸಲ್ಲದ ವಯಸ್ಸಲ್ಲಿ ಸನ್ಯಾಸ ದೀಕ್ಷೆ ಕೊಟ್ಟರೆ ಹೇಗೆ? ನಾನು ಪ್ರಾಯಕ್ಕೆ ಬರುವ ಮುನ್ನವೇ ಸನ್ಯಾಸ ದೀಕ್ಷೆ ನೀಡಿದ್ರು. ಆದ್ರೂ ನನಗೆ ಮಕ್ಕಳಿದ್ದಾರೆ. ಕೇವಲ ನನಗೆ ಮಾತ್ರವಲ್ಲ. ನಮ್ಮನ್ನು ಸೇರಿದಂತೆ ಬಾಕಿಯಿರುವ 7 ಮಠಗಳ ಸ್ವಾಮಿಗಳಿಗೂ ಮಕ್ಕಳಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಸನ್ಯಾಸತ್ವ ನೀಡಿದ್ರೆ, ಪ್ರಾಯವನ್ನು ತಡೆಯುವುದು ಹೇಗೆ’ ಎಂದು ಹೇಳಿಕೆ ನೀಡಿದ್ದರು ಎನ್ನಲಾಗಿತ್ತು. ವಿಡಿಯೋ ವೈರಲ್ ಆದ್ಮೇಲೆ ಅದು ನಾನಲ್ಲ ಅಂತಾ ಸ್ವಾಮೀಜಿ ಸ್ವಷ್ಟನೆಯನ್ನೂ ನೀಡಿದ್ರು. ಆದ್ರೀಗ, ಈ ಹೇಳಿಕೆಯೇ ಇಂದು ಶ್ರೀ ಲಕ್ಷ್ಮೀವರ ಸ್ವಾಮಿಗಳಿಗೆ ಮುಳುವಾಗಿದೆ. ಶ್ರೀಗಳ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಉಳಿದ ಮಠಗಳ ಪೀಠಾಧಿಪತಿಗಳು ಸಭೆ ಸೇರಿ, ಶಿರೂರು ಮಠದ ಪೀಠಾಧಿಪತಿಗಳ ವಿರುದ್ಧ ಕ್ರಮವಾಗಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ.

ಶಿರೂರು ಮಠದ ಪೀಠಾಧಿಪತಿಗಳ ವಿರುದ್ಧ ಕ್ರಮವೇನು?

ಇತ್ತ ಶಿರೂರು ಮಠದ ಪೀಠಾಧಿಪತಿಗಳಾಗಿರುವ ಶ್ರೀ ಲಕ್ಷ್ಮೀವರ ತೀರ್ಥರ ಹೇಳಿಕೆಯನ್ನು ಗಮನಿಸಿದ‌ ಅಷ್ಟಮಠದ ಪೀಠಾಧಿಪತಿಗಳು ಕೆಲ ದಿನಗಳ ಹಿಂದೆ ಸಭೆ ಸೇರಿದ್ರು. ಸಭೆಯ ನೇತೃತ್ವವನ್ನು ಶ್ರೀ ವಿದ್ಯಾಸಾಗರ ಸ್ವಾಮಿಗಳು ವಹಿಸಿಕೊಂಡಿದ್ರು. ಸಭೆಯಲ್ಲಿ 6 ಪ್ರಮುಖ ವಿಚಾರಗಳ ಬಗ್ಗೆ ಮಾತುಕತೆಯಾಗಿದೆ.

ಸಭೆಯಲ್ಲಿ ತೆಗೆದುಕೊಂಡು ನಿರ್ಧಾರಗಳೇನು?

  1. ಶಿರೂರಿನ ಲಕ್ಷ್ಮೀವರ ಶ್ರೀಗಳು ಧರ್ಮ ಉಲ್ಲಂಘನೆ ಮಾಡಿದ್ದಾರೆ. ನನಗೂ ಮಕ್ಕಳಿದ್ದಾರೆ, ಬೇರೆ ಮಠಾಧಿಪತಿಗಳಿಗೂ ಮಕ್ಕಳಿದ್ದಾರೆ ಎಂಬ ಹೇಳಿಕೆ ನೀಡಿ ಧರ್ಮ ಉಲ್ಲಂಘನೆ ಮಾಡಿದ್ದಾರೆ.
  2. ಬೇಡದ ವಿಷಯಕ್ಕೆ ಟೀಕೆ ಟಿಪ್ಪಣಿಗಳು ಮಾಡಿದ್ದಾರೆ. ಮಧ್ವಾಚಾರ್ಯರು ಸೂಚಿಸಿರುವ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
  3. ಈ ಹಿಂದೆ ಪುತ್ತಿಗೆ ಮಠದ ಶ್ರೀಗಳು ಸಮುದ್ರ ಉಲ್ಲಂಘನೆ ಮಾಡಿದ್ರು. ಅದನ್ನು ಪುತ್ತಿಗೆ ಮಠದ ಶ್ರೀಗಳು ನಿಯಮ ಮೀರಿ ಮಾಡಿದ್ರು. ನಾವೇ ಪುತ್ತಿಗೆ ಮಠದ ಶ್ರೀಗಳಿಗೆ ಶ್ರೀ ಕೃಷ್ಣನ ಪೂಜೆ ಬಹಿಷ್ಕರಿಸಿದ್ದೇವೆ‌. ಅವರೂ ಸನ್ಯಾಸಿಗಳೆ. ಈಗ ಶ್ರೀ ಕೃಷ್ಣನ ಮೂಲ ವಿಗ್ರಹ ಮುಟ್ಟಿ ಪೂಜಿಸುತ್ತಿಲ್ಲ. ಅವರ ಶಿಷ್ಯರು ಪೂಜೆ ಸಲ್ಲಿಸುತ್ತಾರೆ. ಶ್ರೀಗಳು ಕಡೆಯದಾಗಿ ತುಳಸಿ ಸಮರ್ಪಿಸುತ್ತಾರೆ. ಅದ್ರೆ ಅವರು ಸನ್ಯಾಸ ಧರ್ಮ ಮೀರಿಲ್ಲ. ಜೊತೆಗೆ ಧರ್ಮ ಬಿಟ್ಟುಕೊಟ್ಟಿಲ್ಲ.
  4. ಈಗ ಶಿರೂರಿನ ಶ್ರೀ ಲಕ್ಷ್ಮೀವರ ಸ್ವಾಮಿಗಳು ಧರ್ಮ ಉಲ್ಲಂಘಿಸಿ, ಧರ್ಮ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಅವರು ಪೀಠ ತ್ಯಾಗ ಮಾಡಬೇಕು.
  5. ಶಿರೂರು ಮಠದ ಪೀಠಾಧಿಪತಿಗಳಾಗಿರುವ ಶ್ರೀ ಲಕ್ಷ್ಮೀವರ ಸ್ವಾಮಿಗಳು ತಮ್ಮ ಶಿಷ್ಯರನ್ನು ಪೀಠಾಧಿಪತಿಗಳ ಸ್ಥಾನಕ್ಕೆ ನೇಮಕ ಮಾಡಬೇಕು.
  6. ಈ ಪ್ರಕ್ರಿಯೆ ಮುಗಿದ ಬಳಿಕವೇ ಮಧ್ವಾಚಾರ್ಯರಿಂದ ಶಿರೂರು ಮಠಕ್ಕೆ ಹಸ್ತಾಂತರವಾಗಿರುವ ಶ್ರೀ ನೃಸಿಂಹ ವಿಗ್ರಹ ಕಾಣಿಯೂರು ಮಠದಿಂದ ಸಿಗುವುದು. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಮಧ್ವಾಚಾರ್ಯರಿಂದ ಸಿಕ್ಕಿರುವ ಶ್ರೀ ನೃಸಿಂಹನ ವಿಗ್ರಹ ಸಿಗುವುದಿಲ್ಲ ಎಂದು ನಿರ್ಧರಿಸಿ, ಲಕ್ಷ್ಮೀವರ ಸ್ವಾಮಿಗಳಿಗೆ ಪತ್ರ ರವಾನೆ ಮಾಡಿದ್ದಾರೆ.

ಇನ್ನು ಅಷ್ಟಮಠಗಳ ಪೈಕಿ ಯಾವುದೇ ಮಠದ ಪೀಠಾಧಿಪತಿಗಳಿಗೆ ಅನಾರೋಗ್ಯ ಅಥವಾ ಅಸೌಖ್ಯವಾದ್ರೆ, ಮಠದಲ್ಲಿ ಪೂಜೆ ಮಾಡುವ ಮೂಲ ದೇವರ ವಿಗ್ರಹವನ್ನು ಬೇರೊಂದು ಮಠಕ್ಕೆ ಕೊಡಬೇಕು. ಮತ್ತೆ ಸ್ವಾಮಿಗಳು ಸೌಖ್ಯವಾದ ಬಳಿಕ ಬೇರೆ ಮಠಕ್ಕೆ ಕೊಟ್ಟಿದ್ದ ದೇವರ ಮೂಲ ವಿಗ್ರಹವನ್ನು ಪಡೆಯಬೇಕು. ಇತ್ತೀಚೆಗೆ ಶಿರೂರಿನ ಶ್ರೀ ಲಕ್ಷ್ಮೀವರ ಸ್ವಾಮಿಗಳು ಅನಾರೋಗ್ಯದಿಂದ ಬಳಲುತ್ತಿದ್ರು. ಈ ಸಂದರ್ಭದಲ್ಲಿ ಶಿರೂರು ಮಠದಲ್ಲಿ ಪೂಜಿಸುತ್ತಿದ್ದ ಶ್ರೀ ನರಸಿಂಹ ದೇವರ ಮೂಲ ವಿಗ್ರಹವನ್ನು ಅಷ್ಟಮಠದ ವ್ಯಾಪ್ತಿಗೆ ಬರುವ ಕಾಣಿಯೂರು ಮಠಕ್ಕೆ ನೀಡಿದ್ರು.

ಒಟ್ಟಿನಲ್ಲಿ ಯಾವುದೋ ಸಂದರ್ಭದಲ್ಲಿ ನೀಡಿದ್ದ ಹೇಳಿಕೆ ಶಿರೂರುಶ್ರೀಗಳಿಗೆ ಮುಳುವಾಗಿದೆ. ಒಂದು ಕಡೆ ಪೀಠ ತ್ಯಾಗಕ್ಕೆ ಪಟ್ಟು, ಮತ್ತೊಂದೆಡೆ ಮಧ್ವಾಚಾರ್ಯರಿಂದ ಸಿಕ್ಕಿದ್ದ ಮೂಲ ಶ್ರೀ ನೃಸಿಂಹ ದೇವರ ವಿಗ್ರಹ ಕಾಣಿಯೂರು ಮಠದ ಪಾಲಾಗಿರುವುದು ಲಕ್ಷ್ಮೀವರ ಸ್ವಾಮಿಗಳ ಚಿಂತೆಗೀಡು ಮಾಡಿದೆ. ಇತರೆ ಮಠದ ಮಠಾಧಿಪತಿಗಳು ತೆಗೆದುಕೊಂಡಿರುವ ತೀರ್ಮಾನಕ್ಕೆ ಯಾವ ರೀತಿಯಲ್ಲಿ ಸ್ಪಂದಿಸುತ್ತಾರೋ ಅನ್ನೋದು ಕುತೂಹಲ ಕೆರಳಿಸಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv