ಸಮನ್ವಯ ಸಮಿತಿ ಸಂಚಾಲಕ ಸ್ಥಾನಕ್ಕೆ ರೇಸ್​, ಮುಂಚೂಣಿಯಲ್ಲಿ ಹೆಚ್​. ವಿಶ್ವನಾಥ್ ಹೆಸರು

ಸಮನ್ವಯ ಸಮಿತಿಗೆ ನನ್ನನ್ನೂ ಆಹ್ವಾನಿಸಿ ಎಂಬ ಶಾಸಕ ಹೆಚ್​. ವಿಶ್ವನಾಥ್ ಸವಾಲಿನ ಬೆನ್ನಲ್ಲೇ, ಡ್ಯಾನಿಶ್ ಅಲಿಯಿಂದ ತೆರವಾಗಿದ್ದ ಸ್ಥಾನ ಭರ್ತಿ ಮಾಡಬೇಕಾದ ಒತ್ತಡ ಜೆಡಿಎಸ್​ ಪಾಳಯದಲ್ಲಿ ಮೂಡಿದೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕಾರಣಕ್ಕೆ ಜೆಡಿಎಸ್​ನಲ್ಲಿ ಸಮಿತಿ ಸಂಚಾಲಕರಾಗಿದ್ದ ಡ್ಯಾನಿಶ್ ಅಲಿ, ಜೆಡಿಎಸ್​ ತೊರೆದು ಬಿಎಸ್​ಪಿಗೆ ಸೇರ್ಪಡೆಯಾಗಿದ್ರು.

ಕಾಂಗ್ರೆಸ್​-ಜೆಡಿಎಸ್​ ಸಮನ್ವಯ ಸಮಿತಿಯಲ್ಲಿ ಜೆಡಿಎಸ್​ನಿಂದ ಸಿಎಂ ಕುಮಾರಸ್ವಾಮಿ ಹಾಗೂ ಡ್ಯಾನಿಶ್ ಅಲಿ ಸ್ಥಾನ ಪಡೆದಿದ್ದರು. ಇನ್ನೂ ಕಾಂಗ್ರೆಸ್​ನಿಂದ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಹಾಗೂ ಸದಸ್ಯರಾಗಿ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಡಿಸಿಎಂ ಪರಮೇಶ್ವರ್ ಸ್ಥಾನ ಪಡೆದಿದ್ರು. ಆದರೆ, ಡ್ಯಾನಿಶ್ ರಾಜೀನಾಮೆ‌ ಬಳಿಕ ಈಗ ಸದಸ್ಯರಾಗಿ ಸಮಿತಿಯಲ್ಲಿ ಸಿಎಂ ಕುಮಾರಸ್ವಾಮಿ ಒಬ್ಬರೇ ಇದ್ದಾರೆ. ಹೀಗಾಗಿ ಡ್ಯಾನಿಶ್ ಸ್ಥಾನಕ್ಕೆ ಯಾರನ್ನು ಸೇರ್ಪಡೆ ಮಾಡಬೇಕೆಂಬ ಬಗ್ಗೆ ಚರ್ಚೆ ಸದ್ಯ ನಡೆಯುತ್ತಿದೆ. ಇನ್ನೊಂದೆಡೆ ಜೆಡಿಎಸ್ ಅಧ್ಯಕ್ಷರಿಗೆ‌ ಆ ಅವಕಾಶ ಸಿಗಲಿದೆ ಎಂಬ ಮಾತು ಕೇಳಿಬಂದಿದೆ.

ಈ ಹಿಂದೆ ಹೆಚ್​. ವಿಶ್ವನಾಥ್, ಸಮನ್ವಯ ಸಮಿತಿಯಲ್ಲಿ ಜೆಡಿಎಸ್ ಅಧ್ಯಕ್ಷರಿಗೂ ಅವಕಾಶ ಕೊಡಬೇಕೆಂದು ಹಲವು ಬಾರಿ ಒತ್ತಾಯಿಸಿದ್ರು. ಆದ್ರೆ ಸಿದ್ದರಾಮಯ್ಯ ವಿರೋಧದ ಕಾರಣ ಹೆಚ್. ವಿಶ್ವನಾಥ್ ಅವರಿಗೆ ಸಮಿತಿಯಲ್ಲಿ ಇನ್ನೂ ಅವಕಾಶ ಸಿಕ್ಕಿಲ್ಲ ಎನ್ನಲಾಗಿತ್ತು. ಇತ್ತೀಚೆಗೆ ಸಿದ್ದರಾಮಯ್ಯಗೆ ತಿರುಗೇಟು ಕೊಡುವ ಭರದಲ್ಲಿ ವಿಶ್ವನಾಥ್ ಸಮನ್ವಯ ಸಮಿತಿಗೆ ನನ್ನನ್ನೂ ಆಹ್ವಾನಿಸಿ ಎಂದು ಸವಾಲು ಹಾಕಿದ್ರು. ಹೀಗಾಗಿ ಡ್ಯಾನಿಶ್ ಅಲಿ ಸ್ಥಾನಕ್ಕೆ ವಿಶ್ವನಾಥ್ ಅವ್ರಿಗೆ ಅವಕಾಶ ಸಿಗಲಿದೆಯಾ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಜೊತೆಗೆ ಸಿದ್ದು ವಿರೋಧದ ಕಾರಣಕ್ಕೆ ಮತ್ತೊಬ್ಬರಿಗೆ ಅವಕಾಶ ಸಿಗಲಿದೆಯಾ ಎಂಬ ಅನುಮಾನವೂ ವ್ಯಕ್ತವಾಗಿದೆ. ಇನ್ನೊಂದೆಡೆ ಜೆಡಿಎಸ್‌ ವರಿಷ್ಠ ಹೆಚ್.ಡಿ ದೇವೇಗೌಡರೇ ಸಮಿತಿಗೆ ಸೇರಲಿದರೂ ಅಚ್ಚರಿ ಇಲ್ಲ ಎಂಬ ಮಾತೂ ಕೇಳಿ ಬರುತ್ತಿದೆ. ಮೇ 23ರ ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಅಷ್ಟರೊಳಗೆ ಡ್ಯಾನಿಶ್ ಸ್ಥಾನಕ್ಕೆ ಜೆಡಿಎಸ್ ವರಿಷ್ಠರೇ ಸೇರ್ಪಡೆಯಾಗ್ತಾರೋ, ಇಲ್ಲವೇ ಹೆಚ್​. ವಿಶ್ವನಾಥ್ ಎಂಟ್ರಿಯಾಗ್ತಾರೋ ಕಾದು ನೋಡಬೇಕು.

ವಿಶೇಷ ವರದಿ: ಹರೀಶ್​ ಕಾಕೋಳು


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv