ಸಮ್ಮಿಶ್ರ ಸರ್ಕಾರವಾದರೂ ತೋಟಗಾರಿಕೆ ವಿವಿಗೆ ಭೂಮಿ ಕೊಡುತ್ತದಾ..!?

ಬಾಗಲಕೋಟೆ: ಜಿಲ್ಲೆಯ ಜನರ ಒತ್ತಡದ ಮೇರೆಗೆ 2008ರಲ್ಲಿ ನಗರದಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ನಿರ್ಮಾಣ ಮಾಡಲಾಗಿತ್ತು. ಇಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳೂ ವ್ಯಾಸಂಗ ಮಾಡುತ್ತಿದ್ದಾರೆ. ತೋಟಗಾರಿಕೆ ವಿವಿಗೆ ಪ್ರಮುಖವಾಗಿ ಬೇಕಾಗಿರುವುದು ವಿಶಾಲವಾದ ಜಾಗ. ಆದರೆ ತೋಟಗಾರಿಕೆ ವಿವಿಗೆ ಇರೋದು ಕೇವಲ 300 ಎಕರೆ ಮಾತ್ರ. ಈ ಅಲ್ಪ ಭೂಮಿಯಲ್ಲಿ ವಿವಿ ಕಟ್ಟಡ, ಗ್ರಂಥಾಲಯ, ಹಾಸ್ಟೆಲ್, ಸಭಾಭವನ ಸೇರಿದಂತೆ ಹತ್ತು ಹಲವಾರು ಕಟ್ಟಡಗಳು ತಲೆ ಎತ್ತಿವೆ. ಆದರೆ ತೋಟಗಾರಿಕೆ ಕೃಷಿ ಮಾಡಲು ಸಮರ್ಪಕ ಭೂಮಿ ಇಲ್ಲದಂತಾಗಿದೆ. ವಿವಿಗೆ ಇನ್ನೂ 700 ಎಕರೆಯಷ್ಟು ಭೂಮಿ ಬೇಕಾಗಿದ್ದು, ಆದಷ್ಟು ಬೇಗ ಸರಕಾರ ಹೆಚ್ಚುವರಿ ಭೂಮಿ ಮಂಜೂರು ಮಾಡಬೇಕಾಗಿದೆ.
ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಒಟ್ಟು ಸಾವಿರ ಎಕರೆ ಭೂಮಿ ಬೇಕೆಂದು ವಿವಿ ಪ್ರಾರಂಭದ ದಿನದಲ್ಲೇ ಅಂದಿನ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಜೊತೆಗೆ ಕಳೆದ ಬಾರಿಯ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೂ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ತೋಟಗಾರಿಕೆ ವಿವಿಗೆ ಬರಬೇಕಾದ ಏಳು ನೂರು ಎಕರೆ ಭೂಮಿ ಮಾತ್ರ ಲಭ್ಯವಾಗಿಲ್ಲ. ಇದರಿಂದ ತೋಟಗಾರಿಕೆ ಕೃಷಿ ಪ್ರಯೋಗಾರ್ಥ ಬೆಳೆ ಬೆಳೆಯಲು, ಪ್ರಾಯೋಗಿಕ ಅಭ್ಯಾಸ ಮಾಡಲು, ಸಸಿ, ಗಿಡ, ಮರ ಬೆಳೆಸಲು ಸಾಧ್ಯವಿಲ್ಲದಂತಾಗಿದೆ. ವಿವಿಗೆ ಸಮರ್ಪಕ ಭೂಮಿ ಸಿಗದೆ ಇರುವ ಕಾರಣಕ್ಕೆ ವಿಧ್ಯಾರ್ಥಿಗಳ ಅಧ್ಯಯನದ ಮೇಲೆ ಇದರ ಪರಿಣಾಮ ಬೀರುತ್ತಿದೆ. ಇನ್ನು ನಿವೃತ್ತಿ ಅಂಚಿನಲ್ಲಿರುವ ತೋಟಗಾರಿಕೆ ವಿವಿ ಉಪಕುಲಪತಿ ಅವರನ್ನು ಕೇಳಿದರೆ, ಈಗಾಗಲೇ ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಇನ್ನೂ ಹೆಚ್ಚುವರಿ ಭೂಮಿಯನ್ನು ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ ಗ್ರಾಮದ ಬಳಿ ಗುರುತು ಕೂಡ ಮಾಡಲಾಗಿದೆ. ಆದರೆ ಅದು ಅರಣ್ಯ ಭೂಮಿ, ಜಿಲ್ಲಾಡಳಿತ ಅರಣ್ಯ ಇಲಾಖೆಗೆ ಪರ್ಯಾಯ ಭೂಮಿಗೆ ಒದಗಿಸುವ ಬಗ್ಗೆ ಮಾತುಕತೆ ಯಾಗಿದೆ. ಅದು ಸಾಕಾರಗೊಂಡರೆ ತುಳಸಿಗೇರಿ ಸಮೀಪದ ಭೂಮಿ ಸಿಗೋದು ಪಕ್ಕಾ. ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪುನಃ ಪ್ರಸ್ತಾವನೆ ಸಲ್ಲಿಸಲಾಗುವುದು ಅಂತಾ ಹೇಳಿದ್ದಾರೆ.
ಒಟ್ಟಾರೆ ಪ್ರಾರಂಭವಾಗಿ ದಶಕಗಳ ಕಾಲ ಕಳೆದರೂ ಇಂದಿಗೂ ತೋಟಗಾರಿಕೆ ವಿವಿ ಭೂಮಿ ಕೊರತೆಯಿಂದ ನರಳಾಡುವಂತಾಗಿದೆ. ಸದ್ಯಕ್ಕೆ ಅಸ್ತಿತ್ವಕ್ಕೆ ಬಂದಿರುವ ಸಮ್ಮಿಶ್ರ ಸರ್ಕಾರವಾದರೂ ಈ ಬೇಡಿಕೆಯನ್ನು ಈಡೇರಿಸುತ್ತಾ ಕಾದು ನೋಡಬೇಕಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv