ಕಾಡಾನೆ ದಾಳಿ: ಪೊಲೀಸರ ವಿರುದ್ಧ ರೈತ ಸಂಘದಿಂದ ಪ್ರತಿಭಟನೆ

ಕೊಡಗು: ಕಾಡಾನೆ ದಾಳಿಗೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳ ವಿರುದ್ಧ ದೂರು ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ದೂರುದಾರರಿಗೆ ಮಾಹಿತಿ ನೀಡದೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ವಿರಾಜಪೇಟೆ ತಾಲೂಕಿನ ಸಿದ್ದಾಪುರ ಪೊಲೀಸ್ ಠಾಣೆ ಮುಂಭಾಗ, ಪೊಲೀಸರ ವಿರುದ್ಧ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಜನವರಿ 22 ರಂದು ಕರಡಿಗೋಡಿನಲ್ಲಿ ಕಾಡಾನೆ ದಾಳಿಗೆ ಮೋಹನ್ ದಾಸ್ ಎಂಬುವವರು ಬಲಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಮೂವರು ಅಧಿಕಾರಿಗಳ ವಿರುದ್ಧ ರೈತ ಸಂಘಟನೆ ಮುಖಂಡರು ಪ್ರಕರಣ ದಾಖಲಿಸಿದ್ದರು.
ಸಿಸಿಎಫ್ ಲಿಂಗರಾಜ್, ಡಿಎಫ್ಒ ಮರಿಯಾ ಕ್ರಿಸ್ಟರಾಜ್, ಆರ್​ಎಫ್​ಓ ಗಂಗಾಧರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಹಳಷ್ಟು ಹೋರಾಟದ ಬಳಿಕ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ದೂರುದಾರರಿಂದ ಸಹಿ ಪಡೆದು ಮಾಹಿತಿ ನೀಡದೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಕೂಡಲೇ ಬಿ ರಿಪೋರ್ಟ್ ವಾಪಸ್ ಪಡೆದು ಸೂಕ್ತ ತನಿಖೆ ನಡೆಸಬೇಕೆಂದು ರೈತರು ಆಗ್ರಹಿಸಿದ್ರು. ತಪ್ಪಿದಲ್ಲಿ ರೈತಪರ ಸಂಘಟನೆಗಳಿಂದ ತೀವ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ರು. ಅಹಿತಕರ ಘಟನೆ ನಡೆಯದಂತೆ ಠಾಣೆಯ ಮುಂಭಾಗ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv