ಪತ್ನಿಯ ಕೊಂದವನಿಗೆ 13 ದಿನಗಳಲ್ಲೇ ಜೀವಾವಧಿ ಶಿಕ್ಷೆ

ಚಿತ್ರದುರ್ಗ: ಕೊಲೆ ಪ್ರಕರಣ ನಡೆದು 13 ದಿನಗಳಲ್ಲಿಯೇ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ ಪ್ರಕರಣ ನಡೆದ 13 ದಿನದಲ್ಲೇ ವಿಚಾರಣೆ ನಡೆಸಿ ಐತಿಹಾಸಿಕ ತೀರ್ಪು ನೀಡಿದ್ದಾರೆ.
ತಾಲ್ಲೂಕಿನ ಬಗ್ಗಲರಂಗವ್ವನಹಳ್ಳಿ ಗ್ರಾಮದಲ್ಲಿ 27 ಜೂನ್ 2018 ರಂದು ಆರೋಪಿ ಶ್ರೀಧರ್ ಪತ್ನಿ ಸಾಕಮ್ಮಳ ಶೀಲ ಶಂಕಿಸಿ ಕೊಲೆ ಮಾಡಿದ್ದ ಘಟನೆ ನಡೆದಿತ್ತು. ತುರುವನೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಶ್ರೀಧರ್ (28) ತನ್ನ ಪತ್ನಿ ಸಾಕಮ್ಮ (26) ತಲೆಯ ಮೇಲೆ ಕಲ್ಲು ಹಾಕಿ ಕೊಂದ ಬಳಿಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ದಂಪತಿಯ ಮಕ್ಕಳು ಧನುಷ್ (3), ಮೈಲಾರಿ (1). ಘಟನೆ ವೇಳೆ ಮೈಲಾರಿ ಹಾಲುಣ್ಣುತ್ತಾ ನಿದ್ರೆಗೆ ಜಾರಿದ್ದ, ಧನುಷ್ ತಾಯಿ ಹೊಟ್ಟೆ ಮೇಲೆ ಮಲಗಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಬಾಲಕ ಧನುಷ್, ತಂದೆಯ ಕೃತ್ಯದ ಬಗ್ಗೆ ಐ ವಿಟ್ನೆಸ್ ಆಗಿ ಕೋರ್ಟ್​ನಲ್ಲಿ ಹೇಳಿಕೆ ನೀಡಿದ. ತೀರ್ಪು ಬಳಿಕ ಶ್ರೀಧರ್, ಮಕ್ಕಳನ್ನು ನೋಡುವ ಆಸೆ ವ್ಯಕ್ತಪಡಿಸಿದ. ಧನುಷ್ ಮೊದಲಿಗೆ, ಅಪ್ಪನ ಬಳಿ ಹೋಗಲು ನಿರಾಕರಿಸಿದ ಬಳಿಕ ‘ಅಮ್ಮನ್ನನು ನೀನೆ’ ಎಂದು ಹೇಳಿ, ಕೆಲ ಕ್ಷಣದ ಬಳಿಕ ಅಪ್ಪನ ಭುಜದ ಮೇಲೆ ಮಲಗಿದ. ಆಗ ಮಕ್ಕಳನ್ನು ಅಪ್ಪಿಕೊಂಡು ಶ್ರೀಧರ್ ಕಣ್ಣೀರಿಟ್ಟ. ಅಪ್ಪ-ಮಕ್ಕಳ ದೃಶ್ಯ ಕಂಡು ಸ್ಥಳದಲ್ಲಿದ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ, ವಕೀಲರು ಮತ್ತು ಪತ್ರಕರ್ತರು ಕಣ್ಣೀರಿಟ್ಟರು.

 ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv