ಱಲಿಗೆ ಸಂತೇಮರಹಳ್ಳಿಯನ್ನೇ ಯಾಕೆ ಆರಿಸಿಕೊಂಡರು ಮೋದಿ?

ಸಂತೇಮರಹಳ್ಳಿ(ಚಾಮರಾಜನಗರ): ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಎಂಟ್ರಿಕೊಟ್ಟಾಗಿದೆ. ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯಲ್ಲಿ ಮೊದಲ ಚುನಾವಣಾ ಱಲಿಯನ್ನುದ್ದೇಶಿಸಿ ಮಾತನಾಡುವ ಮೂಲಕ, ರಾಜ್ಯದಲ್ಲಿ ಮೋದಿ ಪ್ರಚಾರ ಪರ್ಯಟನೆಗೆ ಚಾಲನೆ ಸಿಕ್ಕಿದೆ. ಆದ್ರೆ ಹುಬ್ಬೇರುವಂತೆ ಮಾಡಿರೋದು ಅಂದ್ರೆ ತಮ್ಮ ಮೊದಲ ಚುನಾವಣಾ ಱಲಿಗೆ ಚಾಮರಾಜನಗರದ ಸಂತೇಮರಹಳ್ಳಿಯನ್ನು ಯಾಕೆ ಆರಿಸಿಕೊಂಡರು ಅನ್ನೋದು.

ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಕ್ಷೇತ್ರಗಳ ಮಟ್ಟಿಗೆ ಮೋದಿಯವರ ಚುನಾವಣಾ ಱಲಿ ಆಯೋಜಿಸೋದಾಗಿದ್ದರೆ ಮೈಸೂರಿನಲ್ಲೇ ಏರ್ಪಾಟಾಗುತಿತ್ತು. ಆದ್ರೆ ಬಿಜೆಪಿ, ಫಾರ್‌ ಎ ಚೇಂಜ್‌, ಚಾಮರಾಜನಗರ ಜಿಲ್ಲೆಯನ್ನ ಆರಿಸಿಕೊಂಡಿದೆ. ಯಾವುದೇ ಲೆಕ್ಕಾಚಾರವಿಲ್ಲದೆ ಪ್ರಧಾನಿ ನರೇಂದ್ರ ಮೋದಿಯವರು ಚಾಮರಾಜನಗರ ಜಿಲ್ಲೆಗೆ ಕಾಲಿಟ್ಟಿರಲ್ಲ ಅನ್ನೋದು ರಾಜಕೀಯ ಪಂಡಿತರ ವಿಶ್ಲೇಷಣೆ.
ಹಾಗಾದ್ರೆ ಮೋದಿ ಲೆಕ್ಕಾಚಾರವೇನು?
ಚುನಾವಣಾ ಫಲಿತಾಂಶ ಪ್ರಕಟವಾದ ಮೇಲೆ, ಪ್ರಧಾನಿ ಮೋದಿಯವರು ಭಾಷಣ ಮಾಡಿ ಹೋದ ಕ್ಷೇತ್ರಗಳಲ್ಲಿ ಎಷ್ಟನ್ನು ಬಿಜೆಪಿ ಗೆದ್ದಿದೆ ಅನ್ನೋದು ಕೂಡಾ ಚರ್ಚೆಯಾಗುತ್ತದೆ. ಈ ಚರ್ಚೆ ಮುಂದಿನ ಲೋಕಸಭಾ ಚುನಾವಣೆಯ ಮೇಲೂ ಪ್ರಭಾವ ಬೀರೋದು ಪಕ್ಕಾ. ಹೀಗಾಗಿಯೇ ಬಿಜೆಪಿಗೆ ನೆಲೆಯಿರುವ ಕಡೆಗಳಲ್ಲಿ ಮಾತ್ರವೇ ಮೋದಿಯವರನ್ನು ಱಲಿಗೆ ಕರೆಸಲು ಬಿಜೆಪಿ ವರಿಷ್ಠರು ಎಚ್ಚರಿಕೆಯಿಂದ ಟೂರ್ ಪ್ಲಾನ್‌ ಮಾಡಿದ್ದಾರೆ. ಇಷ್ಟೆಲ್ಲದರ ನಡುವೆಯೂ ಚಾಮರಾಜನಗರ ಜಿಲ್ಲೆಯನ್ನೇಕೆ ಱಲಿಗೆ ಆರಿಸಿಕೊಂಡರು ಅಂತಾ ಪ್ರಶ್ನೆ ಮೂಡೋದು ಸಹಜ.
ಮೈಸೂರಿಗಿಂತಾ ಚಾಮರಾಜನಗರದಲ್ಲೇ ಬಿಜೆಪಿ ಸೇಫ್‌!
ಮೈಸೂರು ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ 22 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಸಂತೇಮರಹಳ್ಳಿಯಲ್ಲಿ ಮೋದಿ ಱಲಿ ಆಯೋಜನೆಯಾಗಿತ್ತು. ಈ ಮೂರೂ ಜಿಲ್ಲೆಗಳಲ್ಲಿನ ಬಿಜೆಪಿಯ ನೆಲೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಮೈಸೂರಿಗಿಂತಲೂ ಚಾಮರಾಜನಗರವೇ ಸೇಫ್‌ ಅಂತಾ ಮೇಲ್ನೋಟಕ್ಕೆ ಭಾಸವಾಗುತ್ತೆ. ಯಾಕಂದ್ರೆ ಈ ಹಿಂದಿನ ಚುನಾವಣೆಗಳನ್ನು ಅವಲೋಕಿಸಿದಾಗ, ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಜಯಿಸಬಹುದಾದಷ್ಟು ವೋಟ್‌ ಬ್ಯಾಂಕ್‌ ಇರೋದು ಚಾಮರಾಜ ಮತ್ತು ಕೃಷ್ಣರಾಜದಲ್ಲಿ ಮಾತ್ರ. (ಕಳೆದ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಮುನ್ನಡೆ ಸಿಕ್ಕಿರೋದು ಈ ಎರಡು ಕ್ಷೇತ್ರಗಳಲ್ಲಿ ಮಾತ್ರ) ಅದೇ ಚಾಮರಾಜನಗರದಲ್ಲಿ ಈವಾಗಿನ ಸನ್ನಿವೇಶ ಬೇರೇನೇ ಇದೆ. ಇಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯಿಸುವ ನಿರೀಕ್ಷೆ ಇರೋದು ಮನದಟ್ಟಾಗುತ್ತೆ. ಆ ಕ್ಷೇತ್ರಗಳಂದ್ರೆ ಚಾಮರಾಜನಗರ, ಹನೂರು, ನಂಜನಗೂಡು ಮತ್ತು ಗುಂಡ್ಲುಪೇಟೆ.
ಸಂತೇಮರಹಳ್ಳಿಯಲ್ಲೇ ಯಾಕೆ ಮೋದಿ ಱಲಿ?
ಸಂತೇಮರಹಳ್ಳಿ ಇರೋದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ. ಲಿಂಗಾಯತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರೋ ಕ್ಷೇತ್ರಗಳಲ್ಲಿ ಗುಂಡ್ಲುಪೇಟೆ ಕೂಡಾ ಒಂದು. ಈ ಬಾರಿ ನಿರಂಜನ್‌ ಕುಮಾರ್‌ ಅವರನ್ನು ಬಿಜೆಪಿ ಇಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಇದೇ ನಿರಂಜನ್‌ ಕುಮಾರ್‌ ಕೆಜೆಪಿಯಿಂದ ಕಣಕ್ಕಿಳಿದು ಮಹಾದೇವಪ್ರಸಾದ್ ವಿರುದ್ಧ ಪರಾಭವಗೊಂಡಿದ್ದರು. ಆದ್ರೆ ಸೋಲಿನ ಅಂತರ ಕೇವಲ 2,203 ಮತಗಳು ಅನ್ನೋದು ಗಮನಾರ್ಹ. ಮಹಾದೇವಪ್ರಸಾದ್‌ ನಿಧನದ ನಂತರ ನಡೆದ ಉಪಚುನಾವಣೆಯಲ್ಲಿ ಗೀತಾ ಮಹದೇವಪ್ರಸಾದ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ನಿರಂಜನ್‌ ಕುಮಾರ್‌ ಸೋಲನುಭವಿಸಿದ್ದರಾದ್ರೂ, ಇಲ್ಲಿ ಗೀತಾ ಪರವಾಗಿ ಕಾಂಗ್ರೆಸ್ ಸರ್ಕಾರದ ಕೃಪೆ ಮತ್ತು ಅನುಕಂಪದ ಅಲೆಯೇ ಹೆಚ್ಚು ಕೆಲಸ ಮಾಡಿತ್ತು. ಈ ಬಾರಿ ಮತ್ತದೇ ನಿರಂಜನ್ ಕುಮಾರ್‌ ಅಭ್ಯರ್ಥಿಯಾಗಿದ್ದಾರೆ. ಈ ಬಾರಿ ನಿರಂಜನ್‌ ಕುಮಾರ್‌ಗೆ ಸ್ವಲ್ಪವೇ ಸ್ವಲ್ಪ ‘ಬೂಸ್ಟ್‌’ ಸಿಕ್ಕರೂ ಗೆಲುವನ್ನ ಖಾತರಿಪಡಿಸಿಕೊಳ್ಳಲು ಸಾಧ್ಯವಿದೆ. ಹೀಗಾಗಿಯೇ ಗುಂಡ್ಲುಪೇಟೆ ಕ್ಷೇತ್ರದ ವ್ಯಾಪ್ತಿಗೆ ಬರುವ ಸಂತೆಮರಹಳ್ಳಿಯನ್ನು ಮೋದಿ ಱಲಿಗೆ ಆರಿಸಿಕೊಳ್ಳಲಾಗಿದೆ.

ಚಾಮರಾಜನಗರದ ನಾಲ್ಕು ಕ್ಷೇತ್ರಗಳಲ್ಲಿ ಜಯದ ನಿರೀಕ್ಷೆ
ಇನ್ನು ಎರಡನೇ ಬಹುಮುಖ್ಯ ಕ್ಷೇತ್ರ ಅಂದ್ರೆ ನಂಜನಗೂಡು ಮೀಸಲು ಕ್ಷೇತ್ರ. ಸದ್ಯ ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಹರ್ಷವರ್ಧನ್‌ ಅವರು ಇಲ್ಲಿ ಕಣದಲ್ಲಿದ್ದಾರೆ. ಕಳೆದ ಬಾರಿ ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್‌ನಿಂದ ಜಯಗಳಿಸಿದ್ದರು. ಈ ಬಾರಿ ಅವರು ಬಿಜೆಪಿಯಲ್ಲಿದ್ದಾರೆ. ಉಪಚುನಾವಣೆಯಲ್ಲಿ ಅವರು ಪರಾಭವಗೊಂಡಿದ್ದಾರಾದ್ರೂ, ಅವರ ಪ್ರಭಾವವಂತೂ ಈಗಲೂ ಕ್ಷೇತ್ರದಲ್ಲಿದೆ. ಹೀಗಾಗಿ ಬಿಜೆಪಿಗೆ ಈ ಕ್ಷೇತ್ರದ ಮೇಲೆ ಕಣ್ಣಿದೆ.

ಮತ್ತೊಂದು ಬಹುಮುಖ್ಯ ಕ್ಷೇತ್ರ ಅಂದ್ರೆ ಹನೂರು. ಕಳೆದ ಬಾರಿ ಪ್ರಮಿಳಾ ನಾಗಪ್ಪ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಹನೂರಿನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದ್ರೆ ಈ ಬಾರಿ ಅವರ ಪುತ್ರ ಪ್ರೀತಂ ನಾಗಪ್ಪ ಅವರು ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಹೇಗೂ ಇದು ಮಾಜಿ ಸಚಿವ ನಾಗಪ್ಪರ ಬಾಹುಳ್ಯದಲ್ಲಿದ್ದ ಕ್ಷೇತ್ರ. ಅವರ ಹೆಸರಿನಲ್ಲೇ ಪ್ರೀತಂ ಅವರೀಗ ಕಣಕ್ಕಿಳಿದಿರೋದು ಬಿಜೆಪಿಗೆ ಕಮಲ ಅರಳುವ ಆಶಾಭಾವ ಮೂಡಿಸಿದೆ. ಹೀಗಾಗಿಯೇ ಹನೂರಿನ ಮೇಲೂ ಬಿಜೆಪಿ ಕಣ್ಣಿಟ್ಟಿದೆ. ಇನ್ನು ಚಾಮರಾಜನಗರ ಕ್ಷೇತ್ರದಲ್ಲಿ ಕಳೆದ ಬಾರಿ ಕೆಜೆಪಿ ದ್ವಿತೀಯ ಸ್ಥಾನ ಗಳಿಸಿತ್ತು. ಹೀಗಾಗಿ ಇಲ್ಲೂ ಬಿಜೆಪಿಗೆ ನೆಲೆ ಇದೆ ಅನ್ನೋದು ಪಕ್ಷದ ವರಿಷ್ಠರಿಗೆ ಮನವರಿಕೆಯಾಗಿದೆ.
ಮೈಸೂರು, ಮಂಡ್ಯ, ಚಾಮರಾಜನಗರ ವ್ಯಾಪ್ತಿಯ ಕ್ಷೇತ್ರಗಳ ಪೈಕಿ, ಬಹುತೇಕ ಕಡೆ ಜೆಡಿಎಸ್‌ಗೆ ಹೆಚ್ಚು ನೆಲೆಯಿದೆ. ಅದೇ ಚಾಮರಾಜನಗರ ಜಿಲ್ಲೆಯ ಈ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್‌ ನಂತರ, ಬಿಜೆಪಿಗೇನೇ ಪೈಪೋಟಿ ಕೊಡುವ ಸಾಮರ್ಥ್ಯ ಹೆಚ್ಚಾಗಿದೆ. ಗೆಲ್ಲುವ ಸಾಧ್ಯತೆಯನ್ನೂ ನಿರೀಕ್ಷಿಸಬಹುದಾಗಿದೆ.
ಲೋಕಸಭಾ ಚುನಾವಣೆ ಮೇಲೂ ಕಣ್ಣಿಟ್ಟಿರುವ ಮೋದಿ
ಕರ್ನಾಟಕ ವಿಧಾನಸಭಾ ಚುನಾವಣೆಯ ಜೊತೆ ಜೊತೆಗೆ 2019ರ ಲೋಕಸಭಾ ಚುನಾವಣೆಯನ್ನು ಕೂಡಾ ಗಮನದಲ್ಲಿರಿಸಿಕೊಂಡು ಕೆಲಸ ಮಾಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಪಕ್ಷದ ರಾಜ್ಯ ನಾಯಕರಿಗೆ ಹೇಳಿದ್ದಾರೆ. ಕಳೆದ ಚುನಾವಣೆಗಳನ್ನು ಅವಲೋಕಿಸಿದ್ರೆ, ಬಿಜೆಪಿ ಇಲ್ಲಿ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿಯನ್ನೇ ಕೊಡುತ್ತಾ ಬಂದಿದೆ. ಪ್ರತಿ ಬಾರಿಯೂ ಎರಡನೇ ಸ್ಥಾನದಲ್ಲಿ ಬಂದು ನಿಂತುಕೊಳ್ಳುತ್ತಿದೆ. ಇದು ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸಿನ ಪ್ರಭಾವವೂ ಇರಬಹುದು. ಆದ್ರೂ ಬಿಜೆಪಿಗೆ ಇಲ್ಲಿ ನೆಲೆಯಿದೆ ಅನ್ನೋದಂತೂ ಪಕ್ಷದ ವರಿಷ್ಠರಿಗೆ ಮನವರಿಕೆಯಾಗಿರುತ್ತೆ. ಇದೀಗ ಅನಿರೀಕ್ಷಿತವಾಗಿ ಪ್ರಧಾನಿ ಮೋದಿಯವರು ತಮ್ಮ ಜಿಲ್ಲೆಗೆ ಆಗಮಿಸಿರೋದು ಚಾಮರಾಜನಗರ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಸಹಜವಾಗಿಯೇ ಉತ್ಸಾಹ ತುಂಬಲಿದೆ. ವರುಣಾದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರರಿಗೆ ಟಿಕೆಟ್ ತಪ್ಪಿರೋದ್ರಿಂದ ಕಾರ್ಯಕರ್ತರು ಆಕ್ರೋಶಗೊಂಡಿದ್ದರು. ಮೋದಿ ಆಗಮನದಿಂದ ಆ ಕಾರ್ಯಕರ್ತರಲ್ಲೂ ಆಕ್ರೋಶ ಶಮನವಾಗಬಹುದಾಗಿದೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ಮೈಸೂರಿನ ಬಗಲಲ್ಲೇ ಇರುವ ಚಾಮರಾಜನಗರದಲ್ಲೂ ಕಮಲ ಅರಳಿಸುವ ಪ್ಲಾನ್‌ ಇದಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv