‘ಎಸ್​-400 ಟ್ರಯಂಫ್’ ಖರೀದಿಯನ್ನು ಅಮೆರಿಕಾ ವಿರೋಧಿಸುತ್ತಿರುವುದು ಏಕೆ?

ಭಾರತ ರಷ್ಯಾದಿಂದ ‘ಎಸ್​-400 ಟ್ರಯಂಫ್’ ಮಿಸೈಲ್​​ ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ಅಮೆರಿಕಾ ಈ ಒಪ್ಪಂದದಿಂದಾಗಿ ಬೆಚ್ಚಿಬಿದ್ದಿದ್ದು. ಆರ್ಥಿಕ ದಿಗ್ಭಂದನದ ಬೆದರಿಕೆ ಒಡ್ಡುತ್ತಿದೆ. ಅಮೆರಿಕಾ ಈ ಖರೀದಿಯನ್ನು ಏಕೆ ವಿರೋಧಿಸುತ್ತಿದೆ ಎನ್ನುವದರ ಕುರಿತು ದೇಶದ್ಯಾಂತ ಚರ್ಚೆಗಳು ನಡೆಯುತ್ತಿವೆ. ಹೌದು ನಿಜವಾಗಿಯೂ ಭಾರತದ ಈ ನಡೆಯನ್ನ ಅಮೆರಿಕಾ ವಿರೋಧಿಸುವುದು ಯಾಕೆ? ಅಮೆರಿಕಾದ ವಿರೋಧಕ್ಕೆ ಮುಖ್ಯವಾಗಿ 5 ಕಾರಣಗಳಿವೆ..!

ಇನ್ನೂ ಮುಗಿದಿಲ್ಲ ಕೋಲ್ಡ್ ವಾರ್..!
ಅಮೆರಿಕಾ ಹಾಗೂ ರಷ್ಯನ್ ಒಕ್ಕೂಟದ ಶೀತಲ ಸಮರದಿಂದಾಗಿ ಇಡೀ ವಿಶ್ವವೇ ಎರಡು ಭಾಗವಾಗಿದ್ದರೆ, ಭಾರತ ನೇತೃತ್ವದ ಕೆಲ ದೇಶಗಳು ಆಲಿಪ್ತ ನೀತಿಯನ್ನು ಅನುಸರಿಸಿದ್ದವು, ಆ ವೇಳೆ ಅಮೆರಿಕಾ ಪಾಕಿಸ್ತಾನಕ್ಕೆ ಬೆಂಬಲ ನೀಡಿ ಅದರ ಬೆನ್ನಿಗೆ ನಿಂತಿದ್ದರೆ, ಇತ್ತ ರಷ್ಯಾ ಭಾರತದ ಬೆಂಬಲಕ್ಕೆ ಎದೆಯೊಡ್ಡಿ ನಿಂತಿತ್ತು. ಆದ್ರೆ, ಬದಲಾದ ಈಗಿನ ಜಾಗತಿಕ ಸಂಬಂಧಗಳಲ್ಲಿ ಇಂದು ಭಾರತ ಕೂಡ ಅಮೆರಿಕಾದ ಆಪ್ತ ರಾಷ್ಟ್ರಗಳಲ್ಲಿ ಒಂದು. ಹಾಗಂತ, ರಷ್ಯಾದಿಂದಲೂ ಭಾರತ ದೂರವಾಗಿಲ್ಲ. ಆದ್ರೆ, ಅಮೆರಿಕಾ ಮತ್ತು ರಷ್ಯಾದ ನಡುವೆ ಇಂದು ನೇರ ಶೀತಲ ಸಮರವಿಲ್ಲದಿದ್ದರೂ, ಕೋಲ್ಡ್​​ವಾರ್​​ ಇನ್ನೂ ತಣ್ಣಗಾಗಿಲ್ಲ. ಅಮೆರಿಕಾದಷ್ಟು ಇಂದು ರಷ್ಯಾ ಬಲಶಾಲಿಯಲ್ಲದಿದ್ದರರೂ ಸಿರಿಯಾದಲ್ಲಿ, ದೊಡ್ಡಣ್ಣನಿಗೇ ಅದು ಮಣ್ಣು ಮುಕ್ಕಿಸಿದೆ. ಸಿರಿಯಾದ ಮೇಲೆ ವಾಯು ದಾಳಿ ನಡೆಸಲು ಅಮೆರಿಕ ನೇತೃತ್ವದ ನ್ಯಾಟೋ ಒಕ್ಕೂಟಕ್ಕೆ ಅಲ್ಲಿ ಸವಾಲಾಗಿ ನಿಂತಿರೋದೂ ಇದೇ ಎಸ್​​-400 ಟ್ರಯಂಫ್ ಅಸ್ತ್ರ..! ಇನ್ನೊಂದೆಡೆ ಅಮೆರಿಕಾದ ಚುನಾವಣೆಯಲ್ಲೂ ರಷ್ಯಾದ ಗುಪ್ತಚರ ಇಲಾಖೆ ಕೆಜಿಬಿ ಆಟ ಆಡಿರೋದು ಬಹಿರಂಗ ಸತ್ಯವೇ.. ಹೀಗಾಗಿ, ರಷ್ಯಾವನ್ನು ಮತ್ತಷ್ಟು ಮಣ್ಣು ಮುಕ್ಕಿಸಬೇಕೆಂದು ಹಂಬಲಿಸುತ್ತಿರೋ ಅಮೆರಿಕಾಕ್ಕೆ, ಭಾರತ ಈ ಒಪ್ಪಂದ ಮಾಡಿಕೊಳ್ಳುವುದು ಇಷ್ಟವಿಲ್ಲ. ಇದರಿಂದ ಒಂದೆಡೆ ಭಾರತ ಫೂಲ್​ಪ್ರೂಫ್ ಆದ್ರೆ, ಇನ್ನೊಂದೆಡೆ ರಷ್ಯಾದ ಆರ್ಥಿಕತೆಯೂ ವೃದ್ಧಿಯಾಗುವ ಸಾಧ್ಯತೆ ಇದೆ.

ಎಸ್ -400 ರಷ್ಯಾ-ಭಾರತೀಯ ರಕ್ಷಣಾ ಸಂಬಂಧವನ್ನು ಬಲಪಡಿಸುತ್ತದೆ

ಎಸ್ -400 ಎಂಬುದು ಒಂದು ನಾನ್​​-ನ್ಯೂಕ್ಲಿಯರ್​​​ ಮಿಸೈಲ್​​. ಇದು ಮಾರಾಟಗಾರ ದೇಶ ಹಾಗೂ ಖರೀದಿದಾರ ದೇಶಗಳಿಗೆ ಬಲವನ್ನು ಒದಗಿಸುತ್ತದೆ. ಅಲ್ಲದೇ ಎರಡು ದೇಶಗಳ ನಡುವಿನ ರಕ್ಷಣಾ ಸಂಬಂಧವನ್ನು ಬಲಪಡಿಸುತ್ತದೆ. ಈ ಕ್ಷಿಪಣಿ ವಾಸ್ತವಿಕವಾಗಿ ಒಂದು ಕಾರ್ಯತಂತ್ರದ ಶಸ್ತ್ರಾಸ್ತ್ರವಾಗಿದೆ. ಇದು ದೀರ್ಘಾಯುಷ್ಯವನ್ನು ಹೊಂದಿದೆ. ಇದು ಸುಮಾರು 30 ವರ್ಷಗಳ ಕಾಲ ಭಾರತದ ರಕ್ಷಣಾ ವ್ಯವಸ್ಥೆಯ ಹೃದಯವಾಗಿ ಕಾರ್ಯನಿರ್ವಹಿಸಲಿದೆ. ಆದ್ದರಿಂದ  ಅಮೆರಿಕಾ ರಷ್ಯಾದ ರಕ್ಷಣಾ ಪಾಲುದಾರಿಕೆಯಿಂದ ಭಾರತವನ್ನು ದೂರ ಇಡಲು ಪ್ರಯತ್ನಿಸುತ್ತಿದೆ. ಅಲ್ಲದೇ ಭಾರತದ ಈ ನಡೆಯನ್ನು ಇತರೆ ದೇಶಗಳು ಅನುರಿಸಿದರೆ ಎನ್ನುವ ಭಯವು ಸಹ ಅಮೆರಿಕಾಕ್ಕೆ ಕಾಡುತ್ತಿದೆ. ಇದರಿಂದ ವಿಶ್ವದ ಮೇಲಿನ ತನ್ನ ಯಾಜಮಾನ್ಯಿಕೆ ಕೈತಪ್ಪುವ ಆತಂಕದಲ್ಲಿದೆ.

ದಕ್ಷಿಣ ಏಷ್ಯಾದಲ್ಲಿ ಭಾರತ ಗೇಮ್​ ಚೇಂಜರ್​​ ಆಗಲಿದೆ

ಭಾರತ ಎಸ್​-400 ಖರೀದಿಸಿದರೇ ದಕ್ಷಿಣ ಏಷ್ಯಾದಲ್ಲಿ ಒಂದು ಪ್ರಬಲ ರಾಷ್ಟ್ರವಾಗಲಿದೆ. ಇದು ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ದೊಡ್ಡ ಹೊಡೆತವನ್ನು ನೀಡಲಿದೆ. ಪಾಕಿಸ್ತಾನದ ರಕ್ಷಣೆಗೂ ಸಹ ಇದು ಕುತ್ತು ತರಲಿದೆ. ಈ ಮೂಲಕ ಭಾರತ ದಕ್ಷಿಣ ಏಷ್ಯಾ ಪ್ರದೇಶದ ಮೇಲೆ ಹಿಡಿತ ಸಾಧಿಸಲಿದೆ ಎನ್ನುವ ಕಾರಣಕ್ಕೆ ಅಮೆರಿಕಾಕ್ಕೆ ಭಯ ಶುರುವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಎಸ್​​-400 ಅನ್ನು ಗಡಿಯಲ್ಲಿ ನಿಯೋಜಿಸುವುದರಿಂದ ಭಾರತ ರಕ್ಷಣೆಯಲ್ಲಿ ಮೇಲುಗೈ ಸಾಧಿಸಲಿದೆ ಎನ್ನಲಾಗ್ತಿದೆ.

ಎಸ್-400 ಒಂದು ಪರಿಣಾಮಕಾರಿ ರಹಸ್ಯ ಶಸ್ತ್ರಾಸ್ತ್ರ

ಹೌದು ಎಸ್​​-400 ಒಂದು ಪರಿಣಾಮಕಾರಿ ರಹಸ್ಯ ಶಸ್ತ್ರಾಸ್ತ್ರವಾಗಿದೆ. ಇದು ಎಫ್​​-35ಗೆ ಸವಾಲೊಡ್ಡುವ ಮೂಲಕ ಅದನ್ನು ದುರ್ಬಲಗೊಳಿಸುತ್ತದೆ. ಇತ್ತೀಚಿನ ಅಮೆರಿಕನ್ ಜೆಟ್ ಅತ್ಯಂತ ವಿವಾದಾಸ್ಪದವಾಗಿದೆ. ಏಕೆಂದರೆ ಹಲವಾರು ವಾಯುಯಾನ ತಜ್ಞರು ಇದು ಸಶಸ್ತ್ರರಹಿತವಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಎಸ್​​-400 ಎಫ್​-35ನ ನ್ಯೂನತೆಗಳನ್ನು ಬಹಿರಂಗಗೊಳಿಸಬಹುದು ಎಂದು ಅಮೆರಿಕಾ ಭಯಪಡುತ್ತಿದೆ. ಅಲ್ಲದೇ ಇದು ಅಮೆರಿಕಾ ರಕ್ಷಣಾ ವ್ಯವಸ್ಥೆಯ ಕುರಿತಾದ ಬೇರೆ ದೇಶಗಳ ದೃಷ್ಟಿ ಕೋನವನ್ನು ಬದಲಾಯಿಸುತ್ತದೆ ಎನ್ನಲಾಗಿದೆ.

ಭಾರತದ ರಕ್ಷಣಾ ಮಾರುಕಟ್ಟೆ ಮೇಲೆ ಕಣ್ಣು

ಭಾರತ ವಿಶ್ವದಲ್ಲಿಯೇ ಹೆಚ್ಚು ಶಸ್ತ್ರಾಸ್ತ್ರ ಆಮದುದಾರ ದೇಶವಾಗಿದೆ. ಕೊನೆಯ ಐದು ವರ್ಷಗಳಲ್ಲಿ ಭಾರತದ ಶಸ್ತ್ರಾಸ್ತ್ರ ಆಮದುನಲ್ಲಿ ಶೇ 24 ರಷ್ಟು ಹೆಚ್ಚಳವಾಗಿದೆ. ಜಗತ್ತಿನ ಆಮದಿನ ಪ್ರಮಾಣದಲ್ಲಿ ಶೇ 12 ರಷ್ಟು ಪಾಲನ್ನು ಹೊಂದಿದೆ. 2008-2017ರ ವರೆಗೆ 100 ಬಿಲಿಯನ್​ ಖರ್ಚು ಮಾಡಿದೆ. ಇದರಲ್ಲಿ ಶೇ 62 ರಷ್ಟು ರಷ್ಯಾದಿಂದಲೇ ಆಮದು ಮಾಡಿಕೊಳ್ಳಲಾಗಿದೆ. ಇದರಿಂದ ಅಮೆರಿಕಾದ ಶಸ್ತ್ರಾಸ್ರ್ತ ತಯಾರಿಕ ಕಂಪನಿಗಳಿಗೆ ಹಿನ್ನಡೆಯಾಗಿದೆ.

ವಿಶೇಷ ಬರಹ: ಭೀಮಣ್ಣ ಮಾದೆ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv