ಕೊಪ್ಪಳದಲ್ಲಿಂದು ಮೋದಿ ಮತಬೇಟೆ, ಈ ಬಾರಿಯಾದ್ರೂ ಸಂಗಣ್ಣ ಕರಡಿಗೆ ವರವಾಗುತ್ತಾ..?

ಕೊಪ್ಪಳ: ಮೋದಿ ಅಲೆ ಕೊಪ್ಪಳದ ಲೋಕಸಭಾ ಕ್ಷೇತ್ರದಲ್ಲಿ ಮೋಡಿ ಮಾಡುತ್ತಾ? ಎಂಬ ಕುತೂಹಲ ಕೊಪ್ಪಳದ ಮತದಾರರಲ್ಲಿ ಮೂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮರೇಶ ಕರಡಿ ಪರ ಪ್ರಧಾನಿ ಮೋದಿ ಪ್ರಚಾರ ನಡೆಸಿ ಭಾಷಣ ಮಾಡಿದ್ದರು.

ಆದ್ರೆ, ಅಭ್ಯರ್ಥಿ ಅಮರೇಶ ಕರಡಿ ಗೆಲುವಿಗೆ ವರ್ಕೌಟ್ ಆಗಿರಲಿಲ್ಲ. ಅಂದು ಹಠಕ್ಕೆ ಬಿದ್ದು ಸಂಗಣ್ಣ ಕರಡಿ ಮಗನಿಗೆ ಟಿಕೆಟ್ ಕೊಡಿಸಿದ್ದರು. ಪ್ರತಿ ಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ 99000 ಕ್ಕೂ ಹೆಚ್ಚು ಮತಗಳನ್ನು ಪಡೆದು ಸುಮಾರು 27000 ಅಂತರದಲ್ಲಿ ಜಯಭೇರಿಯಾಗಿದ್ದರು. ಮಗನಿಗೆ ಟಿಕೆಟ್ ಕೊಡಿಸಿದ್ದ ಸಂಗಣ್ಣಗೆ ಈ ಸಲ ಲೋಕಸಭೆ ಟಿಕೆಟ್ ನೀಡೋದಿಲ್ಲ ಅಂತ ಹೇಳಲಾಗಿತ್ತು. ಆದ್ರೆ ಕೊಪ್ಪಳ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಈ ಬಾರಿಯೂ ಸಂಗಣ್ಣ ಕರಡಿ ಕಣದಲ್ಲಿದ್ದಾರೆ. ದೇಶದಲ್ಲಿ ಮೋದಿ ಅಲೆ ಇದೆ ನನ್ನ ಗೆಲವು ಖಚಿತ ಅಂತಾ ಹೇಳುತ್ತಾರೆ. ಇಂದು ಸಂಗಣ್ಣ ಕರಡಿ ಪರ ಪ್ರಚಾರ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಜನರನ್ನು ಸೆಳೆಯಲು ಜಿಲ್ಲೆಯ ಗಂಗಾವತಿ ತಾಲೂಕಿಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಆದ್ರೆ ಮೋದಿ ಆಗಮನ ಸಂಗಣ್ಣ ಗೆಲುವಿಗೆ ಶ್ರೀರಕ್ಷೆ ಆಗುತ್ತಾ? ಎಂಬುದು ಕೂತುಹಲ ಮೂಡಿಸಿದೆ.

ಸದ್ಯ ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ಬಿಜೆಪಿ ಅಭ್ಯರ್ಥಿ ಸಂಗಣ್ಣ ಕೆಲವು ಬೆಂಬಲಿಗರು ಹಾಗೂ ಕಾರ್ಯಕರ್ತರನ್ನು ದೂರವಿಟ್ಟಿದ್ದಾರೆ ಎಂಬ ಅಪಸ್ವರಗಳು ಕೇಳಿ ಬರುತ್ತಿವೆ. ಇದರಿಂದ ಕರಡಿ ಸಂಗಣ್ಣಗೆ ಹಿನ್ನಡೆಯಾಗಲಿದೆ ಎನ್ನುವುದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ಇಷ್ಟೇ ಅಲ್ದೆ, ಸಂಗಣ್ಣ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ ಚಂದ್ರಶೇಖರ್‌ಗೆ ಟಿಕೆಟ್ ತಪ್ಪಿಸಿ ಮಗ ಅಮರೇಶ ಕರಡಿಗೆ ಟಿಕೆಟ್ ಕೊಡಿಸಿದ್ದರು. ಪ್ರತಿಸ್ಪರ್ಧಿ ಕಾಂಗ್ರೆಸ್ ರಾಘವೇಂದ್ರ ಹಿಟ್ನಾಳ್ ವಿರುದ್ಧ ಸೋಲಬೇಕಾಯಿತು. ಅಂದು ಸಾಕಷ್ಟು ಕಾರ್ಯಕರ್ತರು ಮುನಿಸುಕೊಂಡಿದ್ದರು, ಸ್ವತಃ ಸಿ.ವಿ ಚಂದ್ರಶೇಖರ ಸಂಗಣ್ಣ ಅವರ ವಿರುದ್ಧ ಆಕ್ರೋಶಗೊಂಡಿದ್ರು, ಈ ಬಾರಿಯೂ ಲೋಕಸಭಾ ಟಿಕೆಟ್‌ಗೆ ಹಲವು ಆಕಾಂಕ್ಷಿಗಳಿದ್ದರು. ಆದ್ರೆ ಯಡಿಯೂರಪ್ಪ ಅವರೊಂದಿಗೆ ಪಟ್ಟು ಹಿಡಿದು ಕೆಲವರಿಗೆ ಟಿಕೆಟ್ ತಪ್ಪಿಸಿ ಸಂಗಣ್ಣ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಇದರಿಂದ ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ್ ವಿರುಪಾಕ್ಷಪ್ಪ ಹಾಗೂ ಕೆಲ ಬೆಂಬಲಿಗರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಪ್ರಚಾರದ ವೇಳೆ ಹಲವು ಬೆಂಬಲಿಗರು ಕಾಣುತ್ತಿಲ್ಲ. ಇಂದು ಮೋದಿ ಜಿಲ್ಲೆಗೆ ಬರುವುದರಿಂದ ಬಿಜೆಪಿಯ ಎಲ್ಲಾ ಕಾರ್ಯಕರ್ತರು ಹಾಗೂ ಬೆಂಬಲಿಗರು ಬರಲಿದ್ದಾರೆ. ಇದು ಸಂಗಣ್ಣ ಅವರಿಗೆ ಪ್ಲಸ್ ಪಾಯಿಂಟ್ ಆಗುತ್ತಾ? ಇಲ್ವೊ?ಎಂಬುದು ಮತದಾನದ ಬಳಿಕ ತಿಳಿಯಲಿದೆ. ಆದ್ರೆ ಮೋದಿ ಅಲೆಯಂತು ಜೋರಾಗಿದೆ. ಕಳೆದ 2014ರ ಚುನಾವಣೆಯಲ್ಲಿ ಸಂಗಣ್ಣ ಕರಡಿ 486383 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಹಿಟ್ನಾಳ್‌ರನ್ನು 32414 ಅಂತರದ ಮತಗಳಿಂದ ಸೋಲಿಸಿದ್ದರು. ಈ ಬಾರಿ ಸಂಗಣ್ಣ ವಿರುದ್ಧ ಬಸವರಾಜ್ ಹಿಟ್ನಾಳ ಎರಡನೇ ಪುತ್ರ ರಾಜಶೇಖರ್ ಹಿಟ್ನಾಳ ಕಣದಲ್ಲಿ ಇದ್ದಾರೆ. ಇಬ್ಬರ ನಡುವೆ ಜಿದ್ದಾಜಿದ್ದಿ ಸಮರ ಶುರುವಾಗಿದೆ. ಇಬ್ಬರು ಸಹ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಮತದಾರರು ಯಾರಿಗೆ ಆಶೀರ್ವಾದ ಮಾಡಲಿದ್ದಾರೆ ಎಂಬುದು ಮೇ 23 ರಂದು ನಿರ್ಧಾರವಾಗಲಿದೆ.

ವಿಶೇಷ ವರದಿ: ರಾಜು ಬಿ.ಆರ್​.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv