ನಾಲ್ವರು ಸಚಿವರಲ್ಲಿ ಯಾರಿಗೆ ಒಲಿಯಲಿದೆ HKRDB ಅಧ್ಯಕ್ಷ ಸ್ಥಾನ?

ಕಲಬುರ್ಗಿ: ನೂತನ‌ ಸಚಿವರಿಗೆ ಖಾತೆ ಹಂಚಿಕೆ ಬಳಿಕ ಸಮ್ಮಿಶ್ರ ಸರ್ಕಾರಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(HKRDB) ಅಧ್ಯಕ್ಷ ಸ್ಥಾನವನ್ನ ಯಾರಿಗೆ ನೀಡಬೇಕು ಎನ್ನುವದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳಲ್ಲಿ ಯಾವ ಜಿಲ್ಲೆಗೆ ಈ ಸ್ಥಾನ ಸಿಗಲಿದೆ ಎನ್ನುವದು ಸಹ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ ಹೆಚ್​​​​​ಕೆಆರ್​​​​ಡಿಬಿ ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗುತ್ತಾ ಅಥವಾ ಕಾಂಗ್ರೆಸ್‌ ಪಾಲಾಗುತ್ತಾ? ಎನ್ನುವುದು ಚರ್ಚೆಗೆ ಗ್ರಾಸವಾಗಿದೆ. ಹೈದರಾಬಾದ್​ ಕರ್ನಾಟಕ ಭಾಗದ ನಾಲ್ವರು ಶಾಸಕರು ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಈ ಸಚಿವರು ಜಿಲ್ಲೆಗಳ ಉಸ್ತುವಾರಿ ಪಡೆದ ಬಳಿಕ ಹೆಚ್​​​​​ಕೆಆರ್​​​​ಡಿಬಿಯ ಸದಸ್ಯತ್ವ ಪಡೆಯಲಿದ್ದಾರೆ. ಅಲ್ಲದೇ ಈ ಪ್ರದೇಶದ ಬಳ್ಳಾರಿ ಮತ್ತು‌ ಕೊಪ್ಪಳ ಜಿಲ್ಲೆಯಲ್ಲಿ ಇನ್ನೂ ಯಾರಿಗೂ ಸಚಿವ ಸ್ಥಾನ ನೀಡಲಾಗಿಲ್ಲ.

ಸಂಪುಟ ಸೇರಿದ ಹೈ-ಕ ಭಾಗದ ನಾಲ್ವರು ಸಚಿವರು
ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ರಾಯಚೂರು ಜಿಲ್ಲೆ‌ ಸಿಂಧನೂರು ಕ್ಷೇತ್ರದ ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ, ಬೀದರ್ ದಕ್ಷಿಣ ಕ್ಷೇತ್ರದ ಜೆಡಿಎಸ್ ಶಾಸಕ ಬಂಡೆಪ್ಪ ಕಾಶಂಪೂರ್ ಮತ್ತು ಬೀದರ್ ಜಿಲ್ಲೆ ಹುಮ್ನಾಬಾದ್ ಕಾಂಗ್ರೆಸ್ ಶಾಸಕ ರಾಜಶೇಖರ ಪಾಟೀಲ್​​​​​​ ಸಮ್ಮಿಶ್ರ ಸರ್ಕಾರದ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಈ ನಾಲ್ವರು ಸಚಿವರಲ್ಲಿ ಹೆಚ್​​​ಕೆಆರ್​​​ಡಿಬಿ ಅಧ್ಯಕ್ಷರು ಯಾರಾಗ್ತಾರೆಂಬುದೇ ಕುತೂಹಲಕ್ಕೆ ಕಾರಣವಾಗಿದೆ.
ಹೆಚ್​​​ಕೆಆರ್​​​ಡಿಬಿಯ ನಿಯಮಗಳೇನು?
ಹೈ-ಕ ಜಿಲ್ಲೆಗಳಾದ ಕಲಬುರ್ಗಿ, ಬೀದರ್​​, ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಮಾತ್ರ ಮಂಡಳಿಗೆ ಅಧ್ಯಕ್ಷರಾಗಿ ನೇಮಕ ಮಾಡಬೇಕೆಂಬ ನಿಯಮವಿದೆ. ಅಲ್ಲದೇ ಎರಡು ವರ್ಷಗಳ ಅವಧಿಗಾಗಿ ಸುತ್ತು ಸರದಿಯ ಆಧಾರದ ಮೇಲೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ನಿಯಮವೂ ಸಹ ಇದೆ. ಈ ಹಿಂದೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ರಾಯರೆಡ್ಡಿ ಅಧ್ಯಕ್ಷರಾಗಿದ್ದರು. ಚುನಾವಣೆ ಘೋಷಣೆಯಾದ ಬಳಿಕ ಅವರ ಸ್ಥಾನ ತೆರವಾಗಿದೆ. ಆದ್ರಿಂದಾಗಿ ಎರಡು ತಿಂಗಳಿಂದಲೂ ಈ ಸ್ಥಾನ ಖಾಲಿಯಿದೆ.
ವಾರ್ಷಿಕ ₹1500 ಕೋಟಿ ರೂಪಾಯಿ ಅನುದಾನವಿರುವ ಮಂಡಳಿಯ ಅಧ್ಯಕ್ಷ ಸ್ಥಾನ ಅಲಂಕರಿಸುವ ಸಚಿವರಿಗೆ ಡಬಲ್ ಧಮಾಕಾ. ಮಂಡಳಿಯ ಅಧ್ಯಕ್ಷರಾದ್ರೆ ಹೈ-ಕ ಭಾಗದ 6 ಜಿಲ್ಲೆಗಳ ಮೇಲೆ ಹಿಡಿತ ಸಾಧಿಸುವ ಅವಕಾಶವು ಸಿಗುತ್ತದೆ. ಹಿರಿತನದ ಆಧಾರದ ಮೇಲೆ ಹೆಚ್​​ಕೆಆರ್​ಡಿಬಿ ಅಧ್ಯಕ್ಷರ ನೇಮಕ ಮಾಡ್ತಾರಾ? ಇಲ್ಲವೇ ಹಿಂದಿನ‌ ಅವಧಿಯಲ್ಲಿ ಅವಕಾಶ ಸಿಗದ ಜಿಲ್ಲೆಗೆ ಪ್ರಾತಿನಿಧ್ಯ ಸಿಗುತ್ತಾ ಎಂಬ ಕುತೂಹಲವಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv