ರಂಗನ ಸಾವು: ಹೊಣೆ ಹೊರಬೇಕಾದವ್ರು ಯಾರು? ಬೆಚ್ಚಿಬೀಳಿಸುತ್ತೆ ‘ಫಸ್ಟ್​ನ್ಯೂಸ್​ ರಿಯಾಲ್ಟಿ ಚೆಕ್​’!

ಕೊಡಗು: ಕೊಡಗಿನ ಮತ್ತಿಗೋಡು ಆನೆ ಕ್ಯಾಂಪ್‍ನಲ್ಲಿದ್ದ 45 ವರ್ಷದ ಆನೆ ರಂಗ ಸೋಮವಾರ ಮುಂಜಾನೆ ವೇಳೆ ಅಪಘಾತಕ್ಕೆ ಬಲಿಯಾಗಿದ್ದಾನೆ. ಆತನ ಸಾವಿನ ಹೊಣೆಯನ್ನು ಹೊರಬೇಕಾದವರು ಯಾರು? ಇಂಥದ್ದೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ  ಎದ್ದಿದೆ. ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಹೊಣೆ ಹೊರಬೇಕಾಗಿರುವುದು ಸರ್ಕಾರವೇ ಎಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಇದಕ್ಕೆ ಬೇಕಾದ ದಾಖಲೆ ಕೂಡಾ ಫಸ್ಟ್ ನ್ಯೂಸ್‍ಗೆ ಸಿಕ್ಕಿದೆ.
ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಹಾಗೂ ವಿರಾಜಪೇಟೆ ವಿಭಾಗದ ತಿತಿಮತಿ ವಲಯದ ನಡುವೆ ಸುಮಾರು 8 ಕಿಲೋಮೀಟರ್ ರಾಜ್ಯ ಹೆದ್ದಾರಿ ಹಾದು ಹೋಗುತ್ತದೆ. ಎರಡು ಅರಣ್ಯದಲ್ಲೂ ಕಾಡಾನೆ, ಕಾಡೆಮ್ಮೆ, ಜಿಂಕೆ ಸೇರಿದಂತೆ ಸಾಕಷ್ಟು ಕಾಡು ಪ್ರಾಣಿಗಳಿವೆ. ಪ್ರತಿದಿನ ರಾತ್ರಿ, ಪ್ರಾಣಿಗಳು ರಸ್ತೆ ದಾಟುವುದು ಮಾಮೂಲಿ. ಅಲ್ಲದೇ, ಈ ರಸ್ತೆಯಲ್ಲಿ ವಾಹನಗಳು ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ರಾತ್ರಿ ವೇಳೆ ಸಂಚರಿಸುತ್ತವೆ. ಅದರಲ್ಲೂ ಬಸ್‍ಗಳ ಸಂಖ್ಯೆ ಹೆಚ್ಚು. ವಿಪರ್ಯಾಸ ಅಂದ್ರೆ ಈ ಎಂಟು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಒಂದೇ ಒಂದು ವೇಗ ನಿಯಂತ್ರಕ ಉಬ್ಬುಗಳಿಲ್ಲ. ಆನೆಚೌಕೂರು ಗೇಟ್ ಬಳಿ ಮಾತ್ರ ಒಂದು ಉಬ್ಬು ನಿರ್ಮಾಣ ಮಾಡಲಾಗಿದೆ. ಹೀಗಾಗಿ ನೇರ ರಸ್ತೆ ಇರುವುದರಿಂದ ವಾಹನ ಸವಾರರು ಅತೀ ವೇಗದಲ್ಲಿ ವಾಹನ ಚಲಾಯಿಸುತ್ತಿರುತ್ತಾರೆ.

3 ವರ್ಷದ ಹಿಂದೆಯೇ ಇಲಾಖೆ ಮನವಿ ಮಾಡಿತ್ತು:

ಈ ವ್ಯಾಪ್ತಿಯಲ್ಲಿ ವನ್ಯಪ್ರಾಣಿಗಳಿಗೆ ವಾಹನಗಳಿಂದ ಅಪಾಯ ಎಂಬುದು ಅರಣ್ಯ ಇಲಾಖೆಗೆ ಗೊತ್ತಿತ್ತು. ಇದಕ್ಕೆ ಪೂರಕವೆಂಬಂತೆ 2015 ಜೂನ್ 18ರಂದು ಕಾಡುಕೋಣವೊಂದು ಖಾಸಗಿ ಬಸ್​ಗೆ ಡಿಕ್ಕಿ ಹೊಡೆದು ಮೃತಪಟ್ಟಿತ್ತು. ಹೀಗಾಗಿ 2015 ಜೂನ್​​ 23 ರಂದು ಹುಣಸೂರು ವನ್ಯಜೀವಿ ವಲಯಾಧಿಕಾರಿಗಳು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದು, ಅರಣ್ಯ ವ್ಯಾಪ್ತಿಯ ರಸ್ತೆಯಲ್ಲಿ ರೋಡ್ ಹಂಪ್ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದರು. ಆದ್ರೆ ಮೂರು ವರ್ಷ ಆದ್ರೂ ಒಂದೂ ರೋಡ್​ ಹಂಪ್​ ತಲೆ ಎತ್ತಿಲ್ಲ..! ಅಧಿಕಾರಿವೃಂದದ ನಿರ್ಲಕ್ಷ್ಯತನದಿಂದಾಗಿ ಇದೀಗ ಆನೆಯೊಂದು ಬಲಿಯಾಗಿರುವುದು ದುರಂತವೇ ಸರಿ.

30 ಕಿ. ಮೀ. ವೇಗದಲ್ಲಿ ಮಾತ್ರ ಸಂಚರಿಸಬೇಕು:

ಮತ್ತೊಂದೆಡೆ ವನ್ಯಜೀವಿ ವಲಯದಲ್ಲಿ ವಾಹನಗಳು 30 ಕಿ. ಮೀ. ವೇಗದಲ್ಲಿ ಮಾತ್ರ ಸಂಚರಿಸಬೇಕು ಎಂಬ ನಿಯಮವಿದೆ. ಈ ಸಂಬಂಧ ರಸ್ತೆ ಬದಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಆದ್ರೆ ಅದು ನೋಡುವುದಕ್ಕೆ ಮಾತ್ರ ಸೀಮಿತವಾಗಿದೆ! ಎಲ್ಲೂ ಕಾರ್ಯರೂಪಕ್ಕೆ ಬರುತ್ತಿಲ್ಲ.. ಅತೀ ವೇಗದಲ್ಲಿ ಹೋಗುವ ವಾಹನಗಳ ವಿರುದ್ಧ ಈವರೆಗೆ ಎಲ್ಲೂ, ಯಾವುದೇ ರೀತಿಯ ಕ್ರಮ ಆಗಿಲ್ಲ. ಈ ರಸ್ತೆಯಲ್ಲಿ ದಿನಂಪತ್ರಿ 200ಕ್ಕೂ ಹೆಚ್ಚು ಬಸ್ ಸಂಚರಿಸುತ್ತಿವೆ. ಅದರಲ್ಲೂ ರಾತ್ರಿ ಹೊತ್ತು ಸಂಚರಿಸುವ ಬಸ್‍ಗಳ ಸಂಖ್ಯೆ 80ಕ್ಕೂ ಹೆಚ್ಚು ಬಸ್​ಗಳು ಸಂಚರಿಸುತ್ತವೆ. ಚಾಲಕರಿಗೆ ತಾವು ತಲುಪಬೇಕಾದ ಗಮ್ಯದತ್ತ ಮಾತ್ರ ಗುರಿ ಇರುತ್ತದೆ.

ಇನ್ನಾದರೂ ಶೀಘ್ರವೇ.. ರಸ್ತೆ ಉಬ್ಬುಗಳನ್ನ ನಿರ್ಮಾಣ ಮಾಡಿ ಮುಂದಿನ ದಿನಗಳಲ್ಲಿ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು.  ಜತೆಗೆ ಅತಿ ವೇಗವಾಗಿ ಚಲಿಸುವ ವಾಹನಗಳನ್ನು ಹಿಡಿದು ಶಿಕ್ಷೆಗೆ ಗುರಿಪಡಿಸಿದಲ್ಲಿ ತಾನಾಗಿಯೆ ಪರಿಸ್ಥಿತಿ ಹತೋಟಿಗೆ ಬರುತ್ತದೆ. ಮೂಕ ಪ್ರಾಣಿಗಳ ಪ್ರಾಣವೂ ಉಳಿಯಲಿದೆ. ಈ ನಿಟ್ಟಿನಲ್ಲಿ ಸರ್ಕಾರ, ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ. ವನ್ಯಜೀವಿ ಪ್ರದೇಶ ಎಂಬ ಕಿಂಚಿತ್ತೂ ಕಾಳಜಿ ಇಲ್ಲ ಎಂದು ವನ್ಯಜೀವಿ ಪ್ರೇಮಿಗಳ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎರಡು ಆನೆಗಳಿಗೆ ಡಿಕ್ಕಿಯಾಗಿತ್ತು…!

ಇಂದು ಬೆಳಗಿನ ಜಾವದಲ್ಲಿ ನಡೆದ ಘಟನೆಯಿಂದ ಆನೆ ಮೃತಪಟ್ಟಿದೆ. ಆದ್ರೆ ಈ ಮೊದಲು ಎರಡು ಬಾರಿ ಕ್ಯಾಂಪ್‍ನ ಆನೆಗಳಿಗೆ ವಾಹನಗಳು ಡಿಕ್ಕಿಯಾಗಿವೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. 2015ರಲ್ಲಿ ಕಾಡುಕೋಣ ಸಾವಿನ ನಂತರ 2 ಆನೆಗಳಿಗೆ  ಪ್ರತ್ಯೇಕ ಪ್ರಕರಣದಲ್ಲಿ ಕಾರು ಹಾಗೂ ಲಾರಿ ಡಿಕ್ಕಿಯಾಗಿತ್ತು. ಅದೃಷ್ಟವಶಾತ್ ವಾಹನಗಳಿಗೆ ಸಣ್ಣಪುಟ್ಟ ಡ್ಯಾಮೇಜ್ ಆಗಿದ್ದು ಬಿಟ್ರೆ, ಆನೆಗಳಿಗೆ ಏನೂ ಆಗಿರಲಿಲ್ಲ.

ನೇರ ರಸ್ತೆಯಲ್ಲಿ.. ನಿಯಂತ್ರಣ ಹೇರಲೇಬೇಕು:

ಇನ್ನು, ಹುಣಸೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, 2015ರಲ್ಲಿ ಕಾಡುಕೋಣ ಅಪಘಾತದಲ್ಲಿ ಮೃತಪಟ್ಟ ನಂತರ ನಾವು ರಸ್ತೆ ಉಬ್ಬು ನಿರ್ಮಿಸುವಂತೆ ಹುಣಸೂರು ಹಾಗೂ ಕೊಡಗಿನ ಅಧಿಕಾರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿದ್ದೇವೆ. ಆದ್ರೆ ಈವರೆಗೆ ಯಾವುದೇ ಪ್ರಗತಿಯಾಗಿಲ್ಲ. ಹುಣಸೂರು ಮೂಲಕ ಮೈಸೂರಿಗೆ ಸಂಪರ್ಕ ಕಲ್ಪಿಸುವುದರಿಂದ ಈ ರಸ್ತೆಯಲ್ಲಿ ಹೆಚ್ಚಿನ ವಾಹನಗಳು ಓಡಾಡುತ್ತವೆ. ನೇರ ರಸ್ತೆ ಇರುವುದರಿಂದ ಅವುಗಳ ವೇಗ ಕೂಡಾ ಹೆಚ್ಚಿರುತ್ತದೆ. ಇದಕ್ಕೆ ನಿಯಂತ್ರಣ ಹೇರಬೇಕು ಎಂದು ಹೇಳಿದ್ದಾರೆ.

ಮತ್ತಿಗೋಡಿನ ಮಾವುತ ಅಹಮ್ಮದ್​ ಅಶ್ರಫ್​ ಈ ಬಗ್ಗೆ ಪ್ರತಿಕ್ರಿಯಿಸಿ, ಕ್ಯಾಂಪ್‍ನ ಆನೆಗಳು ಹಗಲು ಹೊತ್ತಲ್ಲಿ ಟ್ರೈನಿಂಗ್ ಮತ್ತಿತರ ಕೆಲಸದಲ್ಲಿ ತೊಡಗಿರುತ್ತವೆ. ಹೀಗಾಗಿ ರಾತ್ರಿ ಹೊತ್ತು ಸರಪಳಿ ಹಾಕಿ ಮೇಯಲು ಬಿಡುತ್ತೇವೆ. ಬೆಳಗ್ಗೆ ಹೊತ್ತು ಮರಳಿ ಕ್ಯಾಂಪ್‍ಗೆ ಬರುತ್ತವೆ. ಕೆಲವೊಮ್ಮೆ ನಾವು ಕರೆದುಕೊಂಡು ಬರುತ್ತೇವೆ. ಹಲವು ಸಂದರ್ಭದಲ್ಲಿ ರಸ್ತೆ ದಾಟಿ ಅರಣ್ಯಕ್ಕೆ ಹೋಗುತ್ತವೆ. ಅಂಥ ಜಾಗಗಳಲ್ಲಿ ಹಂಪ್ ಮಾಡಿದ್ರೆ ಅಪಘಾತ ಆಗುವುದನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.

ನ್ಯಾಯಾಲಯದ ಮೂಲಕ ಹೋರಾಟ:

ಗೌರವ ವನ್ಯಜೀವಿ ಪರಿಪಾಲಕ ಬೋಸ್ ಮಾದಪ್ಪ ಪ್ರತಿಕ್ರಿಯಿಸಿ, ಅರಣ್ಯ ಪ್ರದೇಶದಲ್ಲಿ ರಸ್ತೆಗಳು ಹಾದು ಹೋಗುವಾಗ ಪ್ರಾಣಿಗಳ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಮುಂದೆ ಇಂಥ ಅನಾಹುತವಾಗದಂತೆ ಎಚ್ಚೆತ್ತುಕೊಳ್ಳಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಗಮನಕ್ಕೆ ತರಲಾಗಿದೆ. ನಾನು ಕೂಡಾ ವೈಯಕ್ತಿಕವಾಗಿ ಸಿಸಿಎಫ್ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇನೆ. ಈ ಸಲವೂ ಆಗದಿದ್ದಲ್ಲಿ ನ್ಯಾಯಾಲಯದ ಮೂಲಕ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.

ಇನ್ನು, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್​ ಪ್ರತಿಕ್ರಿಯಿಸಿ, ವಾಹನಗಳ ವೇಗ ನಿಯಂತ್ರಣ ಇದ್ರೆ ಅಪಘಾತ ಆಗುವುದಿಲ್ಲ. ಈ ಭಾಗದಲ್ಲಿ ಎಲ್ಲೆಲ್ಲಿ ಅಗತ್ಯ ಇದೆಯೋ ಅಲ್ಲಿಗೆಲ್ಲ ರೋಡ್ ಹಂಪ್ ಮಾಡಿಸುತ್ತೇವೆ. ಈ ಬಗ್ಗೆ ಅರಣ್ಯ ಸಚಿವರ ಜತೆಗೂ ಚರ್ಚಿಸುತ್ತೇನೆ ಎಂದು ಹೇಳಿದರು.

ವಿಶೇಷ ವರದಿ: ಕಿಶೋರ್ ರೈ, ಕತ್ತಲೆಕಾಡು

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv