ಕಾವೇರಿ ರಭಸಕ್ಕೆ ಕೊಚ್ಚಿಹೋದ ಎರಡು ಶತಮಾನ ಹಳೆಯ ವೆಸ್ಲಿ ಸೇತುವೆ..!

ಚಾಮರಾಜನಗರ: ಕಾವೇರಿ ನದಿ ಪಾತ್ರದಲ್ಲಿ ಸುರಿದಿರುವ ಅಪಾರ ಮಳೆಯಿಂದ ಜಲಾಶಯಗಳು ತುಂಬಿದ್ದು, ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಕಬಿನಿಯಿಂದ 50 ಸಾವಿರ ಕ್ಯೂಸೆಕ್ ಹೊರಬಿಡಲಾಗಿದ್ದು, ನೀರಿನ ರಭಸಕ್ಕೆ ಐತಿಹಾಸಿಕ ಕಲ್ಲಿನ ವೆಸ್ಲಿ ಸೇತುವೆಯ ಮಧ್ಯ ಭಾಗ ಕೊಚ್ಚಿ ಹೋಗಿದೆ. ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರದ ಮಧ್ಯರಂಗ ಬಳಿ ಈ ಸೇತುವೆ ಇದೆ.
ಟಿಪ್ಪು ಸುಲ್ತಾನ್ ರಾಜಾಡಳಿತದ 1818 ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ 400 ಮೀಟರ್ ಉದ್ದದ ಈ ಸೇತುವೆ ನಿರ್ಮಾಣಗೊಂಡಿತ್ತು. ಮದ್ರಾಸ್ ಗವರ್ನರ್ ಲೂಸಿಂಗ್ಟನ್ ಹೆಸರಿನಲ್ಲಿ 1835ರಲ್ಲಿ ವೆಸ್ಲಿ ಸೇತುವೆ ಎಂದು ನಾಮಕಾರಣಗೊಂಡಿತ್ತು. ಅದಾದ ನಂತರ ವೆಸ್ಲಿ ಬದಲಿಗೆ ಲೂಸಿಂಗ್ಟನ್ ಹೆಸರಿನಲ್ಲೇ ಮರುನಾಮಕರಣವೂ ಆಗಿತ್ತು.

ಐತಿಹಾಸಿಕ ವೆಸ್ಲಿ ಸೇತುವೆ:
200 ವರ್ಷಗಳ ಐತಿಹಾಸಿಕ ಸೇತುವೆಯು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಭರಚುಕ್ಕಿ ಜಲಪಾತಕ್ಕೆ ಹೋಗುವ ಮುನ್ನಾ ಸಿಗುತ್ತದೆ. 200 ವರ್ಷಗಳ ಹಿಂದೆ ಕಟ್ಟಿದ್ದ ಈ ಸೇತುವೆಗೆ ಪರ್ಯಾಯವಾಗಿ ಮತ್ತೊಂದು ಸೇತುವೆ ನಿರ್ಮಾಣಗೊಂಡಿದೆಯಾದರೂ, ಈ ಸೇತುವೆ ಮೂಲಕವೆ ಅನೇಕ ಪ್ರವಾಸಿಗರು ಭರಚುಕ್ಕಿಗೆ ತೆರಳಲು ಇಚ್ಚಿಸುತ್ತಿದ್ದರು. ಸಂಪೂರ್ಣವಾಗಿ ಕಲ್ಲಿನಿಂದಲೇ ಕಟ್ಟಿರುವ ವೆಸ್ಲಿ ಸೇತುವೆ ಬಳಿ, ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಕೊಚ್ಚಿಹೋಗಿದೆ. ಮೂರು ದಿನದ ಹಿಂದೆಯಷ್ಟೆ ಪ್ರವಾಸಿಗರಿಗೆ, ಈ ಸೇತುವೆಯ ಮೇಲೆ ಸಂಚರಿಸಲು ನಿರ್ಬಂಧ ವಿಧಿಸಲಾಗಿತ್ತು. ಒಂದು ವೇಳೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕೈಗೊಳ್ಳದಿದ್ದರೆ ಭಾರೀ ಅನಾಹುತವೇ ಸಂಭವಿಸಲಿತ್ತು. ಇನ್ನು ಐತಿಹಾಸಿಕ ಸೇತುವೆ ಕೊಚ್ಚಿಹೋಗಿರುವ ಕುರಿತು ಅನೇಕ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.