ವಿಶ್ವದ ಪ್ರಥಮ ಗೋಸ್ವರ್ಗದಲ್ಲಿ ನಡೆಯಿತು ಆ ಜೋಡಿಯ ವಿಶೇಷ ಮದುವೆ

ಶಿರಸಿ: ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎನ್ನುವ ಮಾತಿದೆ. ಮದುವೆಯಾಗುವವರೂ ಕೂಡ ತಮ್ಮ ಮದುವೆ ಸ್ವರ್ಗದಲ್ಲಲ್ಲದೇ ಇದ್ದರೂ ಸ್ವರ್ಗ ಸದೃಶವಾದ ಸ್ಥಳದಲ್ಲಾದರೂ ಆಗಲಿ ಎಂದು ಬಯಸುವುದು ಸರ್ವೇ ಸಾಮಾನ್ಯ.

ಇಂತಹ ಕನಸನ್ನು ಇಟ್ಟುಕೊಂಡ ನವ ಜೋಡಿಯೊಂದು ತಮ್ಮ ಕನಸನ್ನು ನನಸು ಮಾಡಿಕೊಂಡಿದೆ. ಸಿದ್ದಾಪುರ ತಾಲೂಕಿನ ಭಾನ್ಕುಳಿ ಮಠದಲ್ಲಿ ಇಂತಹ ವಿಶೇಷ ಮದುವೆ ನಡೆದಿದೆ. ಕೆಲವೇ ತಿಂಗಳುಗಳ ಹಿಂದೆ ಲೋಕಾರ್ಪಣೆಗೊಂಡ ವಿಶ್ವದ ಪ್ರಥಮ ಭೂಲೋಕದ ಗೋಸ್ವರ್ಗದಲ್ಲಿ. ಕುಮಟಾದ ಭೈರವಿ ಹಾಗೂ ಸಂದೀಪ್ ಎನ್ನುವ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯನ್ನು ಈ ಗೋಸ್ವರ್ಗದಲ್ಲಿ ಆಚರಿಸಿಕೊಳ್ಳುವ ಮೂಲಕ ಸಂತೋಷಪಟ್ಟರು. ಹಾಗೇ ಈ ಗೋಸ್ವರ್ಗದಲ್ಲಿ ನಡೆದ ಮೊದಲ ಮದುವೆ ಕೂಡ ಇದಾಯಿತು.

ರಾಮಚಂದ್ರಾಪುರ ಮಠದ ಶಾಖಾ ಮಠವಾದ ಭಾನ್ಕುಳಿ ಮಠದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಪರಿಕಲ್ಪನೆಯಲ್ಲಿ ಈ ಗೋಸ್ವರ್ಗ ನಿರ್ಮಿಸಲ್ಪಟ್ಟು, ಕೆಲದಿನಗಳ ಹಿಂದೆ ಲೋಕಾರ್ಪಣೆಯಾಗಿತ್ತು. ಲೋಕಾರ್ಪಣೆ ಸಮಯದಲ್ಲಿ ಸ್ವಾಮೀಜಿಗಳು, ಮನಸ್ಸಿನ ನೆಮ್ಮದಿಗಾಗಿ ಗೋಸ್ವರ್ಗಕ್ಕೆ ಬನ್ನಿ, ಇದು ಮುಂದೆ ಹಲವಾರು ಮಹತ್ಕಾರ್ಯಗಳಿಗೆ ಸಾಕ್ಷಿಯಾಗುತ್ತದೆ ಎಂದಿದ್ದರು.

ಅದೇ ರೀತಿ ಈ ಮದುವೆಯನ್ನು ನಿಶ್ಚಯಿಸಲಾಗಿತ್ತು. ಮದುವೆಗೆ ಆಕರ್ಷಣೆ ರಾತ್ರಿ ಸಮಯ ಸಾವಿರಾರು ಹಸುಗಳ ನಡುವೆ ಮತ್ತು 2 ಸ್ಟೇಜ್​ಗಳಲ್ಲಿ ಸಂಗೀತ ಹಾಗೂ ಯಕ್ಷಗಾನ ವೇಷಧಾರಿಗಳಿಂದ ಸುಗ್ಗಿ ಕುಣಿತ, ಕೋಲಾಟಗಳನ್ನು ಏರ್ಪಡಿಸಲಾಗಿತ್ತು. ಇಂತಹ ಮದುವೆಗಳನ್ನು ನೋಡುವುದು ಕಣ್ಣಿಗೆ ಹಬ್ಬವೇ ಸರಿ.

ಸಾವಿರಾರು ಜನರು ಈ ಮದುವೆಯನ್ನು ಕಣ್ತುಂಬಿಕೊಂಡರು. ಬಂದವರೆಲ್ಲಾ ಇಂತಹ ಒಂದು ಗೋಸ್ವರ್ಗದಲ್ಲಿ ನಡೆದ ಮದುವೆ ಸ್ವರ್ಗದ ಪರಿಸರವನ್ನು ನೋಡಿದಂತಿತ್ತು ಎಂದಾಗ ಕುಟುಂಬದ ಯಜಮಾನರಲ್ಲಿ ಸಾರ್ಥಕತೆಯ ಭಾವ, ಹಾಗೂ ಸಂತಸವನ್ನು ಇಮ್ಮಡಿಗೊಳಿಸಿತ್ತು. ಮುಂದೆ ಇಂತಹ ಹಲವಾರು ಕಾರ್ಯಕ್ರಮಗಳು ನಡೆಯೋದಿಕ್ಕೆ ಈ ಮದುವೆ ಒಂದು ನಾಂದಿಯಾಯಿತು ಎನ್ನುವ ಖುಷಿ ನಮ್ಮದು ಅಂತಾ ಕುಟುಂಬದ ಯಜಮಾನ ಸುಬ್ರಾಯ ಭಟ್ ತಿಳಿಸಿದ್ರು.

ಸ್ವರ್ಗ ದೇವತೆಗಳ ಸಾನ್ನಿಧ್ಯ ಹೊಂದಿರುವ ಸಹಸ್ರಾರು ಗೋವುಗಳ ಮಧ್ಯೆ ನಡೆಯುವ ಮದುವೆ ಒಂದು ಅದೃಷ್ಟವೇ ಸರಿ. ಇಂತಹ ಅದೃಷ್ಟ ಎಲ್ಲರಿಗೂ ಸಿಗೋದಿಲ್ಲ. ಆದ್ರೆ ಈ ಒಂದು ಅದೃಷ್ಟವನ್ನು ದೊರಕಿಸಿದ ಕ್ರೆಡಿಟ್ ಮಠಕ್ಕೆ ಸಲ್ಲುತ್ತದೆ. ಮುಂದೆಯೂ ಭೂಲೋಕದ ಗೋಸ್ವರ್ಗದಲ್ಲಿ ಇಂತಹ ಹಲವಾರು ಕಾರ್ಯಕ್ರಮಗಳು ನಡೆಯಲಿ ಎಂದು ಮದುವೆಯಲ್ಲಿ ಪಾಲ್ಗೊಂಡಿದ್ದ ಹಿರಿಯರೊಬ್ಬರು ಹೇಳಿದ್ದು ಉಚಿತವಾಗಿತ್ತು.