ಜಲ ಸಂಪನ್ಮೂಲ ಸಚಿವ ಶಿವಕುಮಾರ್​​ ಡೇ ಔಟ್​ ಇನ್​ ಧಾರವಾಡ..!

ಧಾರವಾಡ: ಜಲಸಂಪನ್ಮೂಲ ಸಚಿವರು ಕಳಸಾ ಬಂಡೂರಿ ನಾಲಾಗೆ ಭೇಟಿ ನೀಡುವ ದಿನಾಂಕ ಇಂದು ನಿಗದಿಯಾಗಿತ್ತು. ಈ ಭೇಟಿಯನ್ನು ಗೋವಾದವರು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿ ಭೇಟಿ ದಿನಾಂಕವನ್ನು ಬದಲಾಯಿಸಲಾಗಿದೆ ಎಂದು ರಾಜ್ಯ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​​ ಹೇಳಿದ್ದಾರೆ.
ಧಾರಾವಾಡದಲ್ಲಿ ಮಾತನಾಡಿದ ಅವರು, ಗೋವಾ ರಾಜ್ಯದಲ್ಲಿ ಕೂಡ ಉತ್ತಮ ಮಳೆ ಆಗಿದೆ. ರಾಜ್ಯದಲ್ಲೂ ಚೆನ್ನಾಗಿ ಮಳೆ ಆಗಿರುವುದರಿಂದ ಕೆರೆ, ಡ್ಯಾಮ್​ಗಳು ತುಂಬಿವೆ. ಹೀಗಾಗಿ ಆ ಭಾಗದಲ್ಲಿ ಒಂದು ಸಲಹಾ ಸಮಿತಿ ರಚನೆ ಮಾಡಿ ಜಲ ನಿರ್ವಹಣೆ ಮಾಡುವಂತೆ ತಿಳಿಸಿದ್ದೇನೆ ಎಂದರು.
ರಾಜ್ಯವ್ಯಾಪಿ ಇಲಾಖೆ ಕೆಲಸ ಆರಂಭವಾಗುವ ಮುನ್ನ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಜಿಪಿಎಸ್ ಮೂಲಕ ತಮ್ಮ ಹಾಗೂ ಇಲಾಖೆಯ ಎಂಡಿ ಕಚೇರಿಗೆ ಮಾಹಿತಿ ನೀಡಬೇಕು. ಅಧಿಕಾರಿಗಳು ಎಲ್ಲೋ ಕುತ್ಕೊಂಡು ಸುಮ್ಮನೆ ಕತೆ ಕಟ್ಟೋದು ಇನ್ನುಂದೆ ನಡೆಯಲ್ಲ. ಇಲಾಖೆ ನಡೆಸಿರುವ ಕೆಲ ಕಾಮಗಾರಿಗಳ ಗುಣಮಟ್ಟ ನನಗೆ ಸರಿ ಅನಿಸಿಲ್ಲ. ಈ ಬಗ್ಗೆ ನಾನು ನೇರವಾಗಿ ಕೆಳಮಟ್ಟದ ಅಧಿಕಾರಿಗಳ ಜೊತೆಗೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದೇನೆ. ಅವರಿಗೆ ಬೇಕಾದ ಸಲಹೆ ಸೂಚನೆ ನೀಡಿದ್ದೇನೆ ಎಂದು ಸಚಿವರು ಹೇಳಿದರು.
ಇನ್ನು ಬಜೆಟ್​​ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮಂಡಿಸಿದ ಬಜೆಟ್​​ ಎರಡೂ ಒಂದೇ. ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳು ಜಾರಿಯಾಗುತ್ತವೆ. ರೈತರ ಸಾಲ ಮನ್ನಾ ರಾಜ್ಯದ ಎಲ್ಲಾ ಭಾಗದ ರೈತರಿಗೂ ಅನ್ವಯಿಸುತ್ತದೆ. ಸಾಲ ಮನ್ನಾ ಒಂದು ಭಾಗಕ್ಕಷ್ಟೇ ಸೀಮಿತವಾಗಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ಕೊಟ್ಟರು.


ಡಿಮ್ಹಾನ್ಸ್​ಗೆ ದಿಢೀರ್​ ಭೇಟಿ, ಅಧಿಕಾರಿಗಳಿಗೆ ತರಾಟೆ
ಧಾರವಾಡ- ಬೆಳಗಾವಿ ರಸ್ತೆಯಲ್ಲಿರುವ ಡಿಮ್ಹಾನ್ಸ್​ಗೆ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದು, ಭೇಟಿ ವೇಳೆ ಆಡಳಿತ ಮಂಡಳಿಯ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ನಿಮ್ಹಾನ್ಸ್ ಮಾದರಿಯಲ್ಲಿ ಧಾರವಾಡದಲ್ಲಿ ನಿರ್ಮಿಸಲಾಗುತ್ತಿರುವ ಡಿಮ್ಹಾನ್ಸ್-ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಇದಾಗಿದ್ದು, ಇಲ್ಲಿರುವ ಮುಖ್ಯ ಆಡಳಿತಾಧಿಕಾರಿ ಶಾರದಾ ಕೋಲ್ಕಾರ್ ಬಗ್ಗೆ ಕೆಲ ಆರೋಪಗಳು ಕೇಳಿಬಂದಿದ್ದವು. ಡಿಮಾನ್ಸ್​ನಲ್ಲಿರುವ ಕೆಲ ಸಿಬ್ಬಂದಿಗಳ ಮೇಲೆ ಜಾತಿನಿಂದನೆ ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ ಶಾರದಾ ಕೋಲ್ಕಾರ್ ಕುಮ್ಮಕ್ಕು ಇದೆ ಅಂತಾನೂ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸಚಿವರು ಶಾರದಾ ಕೋಲ್ಕಾರ್​ಗೆ ಫುಲ್ ಕ್ಲಾಸ್ ತಗೆದುಕೊಂಡಿದ್ದು, ಒಂದು ತಿಂಗಳೊಳಗಾಗಿ ಇದನ್ನು ಸರಿಪಡಿಸದಿದ್ದರೆ ಅಮಾನತ್ತು ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.