ಮೇಕೆದಾಟು ಯೋಜನೆ: ತಮಿಳುನಾಡು ಸಿಎಂಗೆ ಸಚಿವ ಡಿ.ಕೆ.ಶಿವಕುಮಾರ್ ಪತ್ರ

ಬೆಂಗಳೂರು: ಮೇಕೆದಾಟು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು ಸರ್ಕಾರಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದಾರೆ. ತಮಿಳುನಾಡು  ಸಿಎಂ ಕೆ.ಪಳನಿಸ್ವಾಮಿಗೆ ಪತ್ರ ಬರೆದಿರುವ ಸಚಿವ ಡಿ.ಕೆ.ಶಿವಕುಮಾರ್‌, ತಮಿಳುನಾಡು ಸರ್ಕಾರದ ಜೊತೆ ಚರ್ಚೆಗೆ ನಾವು ಸಿದ್ಧರಿದ್ದೇವೆ. ಚರ್ಚೆಗೆ ಸೂಕ್ತ ಸಮಯವನ್ನ ನೀವೇ ನಿರ್ಧರಿಸಿ. ಮುಕ್ತವಾಗಿ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅವಶ್ಯಕತೆಯಿದೆ. ತಪ್ಪು ತಿಳುವಳಿಕೆಯಿಂದ ನೀವು ಮೇಕೆದಾಟು ಯೋಜನೆಯನ್ನ ವಿರೋಧಿಸುತ್ತಿದ್ದೀರಿ ಅಂತಾ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​ ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಮೇಕೆದಾಟು ಯೋಜನೆ ಜಾರಿಗೆ ಅವಕಾಶ ನೀಡದಂತೆ ತಮಿಳುನಾಡು ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಈ ಹಿನ್ನೆಲೆಯಲ್ಲಿ ಪತ್ರ ಬರೆದಿರುವ ಶಿವಕುಮಾರ್​, ನಮ್ಮ ಯೋಜನೆಯ ಬಗ್ಗೆ ತಪ್ಪು ತಿಳಿದುಕೊಂಡಿದ್ದೀರಾ. ಸಮುದ್ರಕ್ಕೆ ವ್ಯರ್ಥವಾಗಿ ಹೋಗುವ ನೀರನ್ನ ಹಿಡಿದಿಡುವುದಷ್ಟೇ ನಮ್ಮ ಯೋಜನೆಯ ಉದ್ದೇಶ. ಕುಡಿಯುವ ನೀರಿಗಾಗಿ ಮಾತ್ರ ಯೋಜನೆಗೆ ಮುಂದಾಗಿದ್ದೇವೆ. ನಿಮಗೆ ಬರುವ ನೀರಿಗೆ ಎಂದೂ ತೊಂದರೆಯಾಗಲ್ಲ. ಅಣೆಕಟ್ಟೆಯಲ್ಲಿ ನೀರಿದ್ದರೆ ನೀವೂ ಬಳಸಿಕೊಳ್ಳಬಹುದು ಅಂತಾ ತಮಿಳುನಾಡು ಸಿಎಂ ಕೆ.ಪಳನಿಸ್ವಾಮಿಗೆ ಪತ್ರ ಬರೆದಿದ್ದಾರೆ.