ತ್ರಿವಳಿ ನದಿಗಳಿದ್ರೂ.. ಜಿಲ್ಲಾ ತೋಟಗಾರಿಕಾ ವಿವಿಗೆ ನೀರಿಲ್ಲ!

ಬಾಗಲಕೋಟೆ: ಜಿಲ್ಲೆಗೆ ಶಿಕ್ಷಣ ಕಳಸಪ್ರಾಯವಾಗಿರುವ ಇಲ್ಲಿನ ತೋಟಗಾರಿಕಾ ವಿವಿ, ರಾಜ್ಯದಲ್ಲಿ ತನ್ನದೇ ಆದ ಪ್ರಾಮುಖ್ಯತೆ ಪಡೆದುಕೊಂಡಿದೆ. ಆದ್ರೆ ಪ್ರಸಿದ್ಧಿಗೆ ಪಾತ್ರವಾಗಿರುವ ಆ ವಿಶ್ವವಿದ್ಯಾಲಯಕ್ಕೀಗ ಸದ್ಯ ನೀರಿನ ಬರ ಕಾಡ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ತ್ರಿವಳಿ ನದಿಗಳು ಹರಿಯುತ್ತಿದ್ರೂ ತೋಟಗಾರಿಕಾ ವಿವಿ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಇರುವ ಮೂರೇ ಬೋರವೆಲ್‌ಗಳಿಂದ ನೂರಾರು ಎಕರೆ ಪ್ರದೇಶದಲ್ಲಿನ ತೋಟಗಾರಿಕಾ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗಾಗಿ ಬೆಳೆಸಿರುವ ವಿವಿಧ ಪ್ರಭೇದದ ಬೆಳೆಗಳು ನೀರಿನ ಬರದಿಂದ ಬಾಡುತ್ತಿವೆ.

ತೋಟಗಾರಿಕಾ ವಿವಿಯಲ್ಲಿ ಸದ್ಯ ಕಾರ್ಯ ನಿರ್ವಹಿಸುತ್ತಿರೋದು ಕೇವಲ ಮೂರು ಬೋರ್​ವೆಲ್‌ಗಳು ಮಾತ್ರ. ಬಾಗಲಕೋಟೆಯ ನವ ನಗರದ ಹೊರವಲದಲ್ಲಿರುವ ತೋಟಗಾರಿಕಾ ವಿವಿಯ ವಿಸ್ತೀರ್ಣ ಒಟ್ಟು 300 ಎಕರೆ. ಈ ವಿವಿಯಲ್ಲಿ ಒಟ್ಟು 15 ಬೋರ್​ವೆಲ್‌ಗನ್ನ ಕೊರೆಯಿಸಲಾಗಿದೆ. ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗಾಗಿ ವಿವಿಯ ನೂರಾರು ಎಕರೆ ವಿಸ್ತೀರ್ಣದ ಆವರಣದಲ್ಲಿ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ಸಪೋಟ, ಪೇರಲೆ ಹಣ್ಣು, ಸೀತಾಪಲ, ದಾಳಿಂಬೆ, ಬಾಳೆ, ಕ್ಯಾರೆಟ್, ಮಾವು ಹೀಗೆ ಅನೇಕ ಪ್ರಭೇದದ ಬೆಳೆಗಳನ್ನ ಬೆಳೆಯಲಾಗಿದೆ. ಬೆಳೆಯುವ ವಿಧಾನ, ಹೀಗೆ ಅನೇಕ ಸಂಶೋಧನೆಗಳನ್ನ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಇಲ್ಲಿ ತಿಳಿಸಿಕೊಡಲಾಗುತ್ತೆ. ಇಂತಹ ಬೆಳೆಗಳಿಗೆ ಮುಖ್ಯವಾಗಿ ಬೇಕಿರೋದು ನೀರು, ಆದ್ರೆ ವಿವಿಯಲ್ಲಿರೋ 15 ಬೋರ್​ವೆಲ್‌ಗಳಲ್ಲಿ, ಕೇವಲ ಮೂರು ಬೋರ್​ವೆಲ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದ ಬೋರ್​ವೆಲ್‌ಗಳು ಬತ್ತಿ ಹೋಗಿವೆ. ಹೀಗಾಗಿ ವಿವಿಗೆ ನೀರಿನ ಅಭಾವ ಕಾಡ್ತಿದೆ. ಈ ಬಗ್ಗೆ ವಿವಿ ಆಡಳಿತ ಮಂಡಳಿಯವರನ್ನ ಕೇಳಿದ್ರೆ ನಮ್ಮಲ್ಲಿ ನೀರಿನ ಸಮಸ್ಯೆಯೇ ಇಲ್ಲ ಅಂತಾ ನುಣುಚಿಕೊಳ್ತಾರೆ.

ಇಷ್ಟೆಲ್ಲಾ ನೀರಿನ ಸಮಸ್ಯೆಗಳಿದ್ರೂ ನಮ್ಮ ವಿವಿ ಆಡಳಿತ ಮಂಡಳಿಯಾಗಲೀ, ಜಿಲ್ಲೆಯ ಜನ ಪ್ರತಿನಿಧಿಗಳಾಗಲೀ ನೀರಿನ ಅಭಾವದ ಸಮಸ್ಯೆಗೆ ಶಾಶ್ವತ ಪರಿಹಾರದ ಬಗ್ಗೆ ಯೋಚಿಸಿಲ್ಲ. ತ್ರಿವಳಿ ನದಿಗಳಿರುವ ಜಿಲ್ಲೆಯಲ್ಲಿ, ತೋಟಗಾರಿಕಾ ವಿವಿಗೆ ನೀರು ಪೂರೈಕೆ ಮಾಡೋದು ದೊಡ್ಡ ಮಾತಲ್ಲ. ಆದ್ರೂ ಅದ್ಯಾಕೋ ಇಲ್ಲಿಯವರೆಗೆ ವಿವಿಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿದಿಲ್ಲ. ಹೀಗಾಗಿ ನೀರಿನ ಅಭಾವದಿಂದ ವಿವಿಯ ಆವರಣದಲ್ಲಿ ಬೆಳೆಯಲಾದ ಬೆಳೆಗಳು ಬಾಡಿಹೊಗ್ತಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnew.tv