ಬಾಲಕಿಯರಿಗೆ ಚೇಷ್ಟೆ ಮಾಡುತಿದ್ದ ವಾಟರ್‌ಮ್ಯಾನ್‌ ಅರೆಸ್ಟ್‌!

ತುಮಕೂರು: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಜಾವೇದ್ ಬಿನ್ ಅಬ್ಬಾಸ್ ಸಾಬ್(40) ಅನ್ನೋ ಆರೋಪಿಯೊಬ್ಬನನ್ನು ಶಿರಾ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಕೊಂಡಿದ್ದಾರೆ.

 

ಇದೇ ಮೇ 28ರಂದು ಶಿರಾ ಪಟ್ಟಣದ ಮೊಹಲ್ಲಾ ಪಾರ್ಕ್ ನಿವಾಸಿ ಅಬ್ಬಾಸ್ ಸಾಬ್, ಮನೆ ಮುಂದೆ ಆಟವಾಡುತ್ತಿದ್ದ 2ನೇ ತರಗತಿ ಹುಡುಗಿಯನ್ನು ಸನ್ನೆ ಮಾಡಿ ಕರೆದಿದ್ದನೆನ್ನಲಾಗಿದೆ. ಇದನ್ನು ಗಮನಿಸಿದ ಅಕ್ಕ ಪಕ್ಕದ ಮನೆಯವರು ಹುಡುಗಿಯ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣವೇ ಮಗುವಿನ ಪೋಷಕರು ಸ್ಥಳಕ್ಕೆ ಬಂದು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಚಾರಣೆ ವೇಳೆ ಇದೇ ರೀತಿಯ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ. ಈ ವೇಳೆ ಮತ್ತೊಬ್ಬ ಅಪ್ರಾಪ್ತೆಗೆ ಆರೋಪಿಯ ವಿಕೃತ ಕೃತ್ಯದಿಂದ ಮೈ ಮೇಲೆ ಗಾಯಗಳಾಗಿರುವುದು ಕೂಡ ಬೆಳಕಿಗೆ ಬಂದಿದೆ.

ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಈತ, ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯರನ್ನು ಒತ್ತಾಯ ಪೂರ್ವಕವಾಗಿ ಮನೆ ಒಳಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ಕೊಡುತಿದ್ದನೆನ್ನಲಾಗಿದೆ. 7 ಹಾಗೂ 9 ವರ್ಷದ ಬಾಲಕಿಯರನ್ನ ಈತ ಟಾರ್ಗೆಟ್‌ ಮಾಡುತ್ತಿದ್ದ ಅನ್ನೋ ಸಂಗತಿ ಕೂಡ ಬೆಳಕಿಗೆ ಬಂದಿದೆ.

ಆರೋಪಿಯನ್ನ ಬಂಧಿಸಿರುವ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.