2018ಕ್ಕೆ ಗುಡ್ ಬೈ ಹೇಳಿ ಹೊಸ ವರ್ಷ ವೆಲ್ಕಮ್ ಮಾಡೋಕೆ ಎಲ್ಲಾರು ರೆಡಿ ಆಗ್ತಾ ಇದ್ದಾರೆ. ಪಾರ್ಟಿ ಅಂದ್ರೆ ಮೋಜು ಮಸ್ತಿ, ಡ್ಯಾನ್ಸ್, ಮ್ಯೂಸಿಕ್, ನಾನ್ವೆಜ್ ಎಲ್ಲಾ ಇದ್ದಿದ್ದೇ. ಸಾಕಷ್ಟು ಜನರಿಗೆ ಆಲ್ಕೋಹಾಲ್ ಇಲ್ಲದಿದ್ರೆ ಅದು ಪಾರ್ಟಿ ಅಂತಾನೇ ಅನ್ಸೋದಿಲ್ಲ. ಆದರೆ ಇನ್ನೂ ಕೆಲವರಿಗೆ ಆಲ್ಕೋಹಾಲ್ ಕುಡಿಬಾರ್ದು ಅನ್ಕೊಂಡ್ರೂ ಕುಡಿಯೋದನ್ನ ಬಿಡೋಕಾಗಲ್ಲ. ಆದ್ರೆ ಮನಸ್ಸು ಮಾಡಿದ್ರೆ ಕುಡಿಯೋದನ್ನ ಹಂತ ಹಂತವಾಗಿ ಕಡಿಮೆ ಮಾಡಿಕೊಳ್ಳಬಹುದು ಅನ್ನೋದಕ್ಕೆ ಇಲ್ಲಿದೆ ಸಿಂಪಲ್ ಚಾಲೆಂಜ್.
ಡ್ರೈ ಜನವರಿ ಅನ್ನೋ ಕಾನ್ಸೆಪ್ಟ್ ಒಂದು ಈಗ ಬಹಳ ಸುದ್ದಿ ಮಾಡ್ತಿದೆ. ಈ ಕಾನ್ಸೆಪ್ಟ್ ಪ್ರಕಾರ ಜನವರಿ ಒಂದು ತಿಂಗಳ ಕಾಲ ಆಲ್ಕೋಹಾಲ್ ಸೇವನೆಯನ್ನ ಸಂಪೂರ್ಣವಾಗಿ ಬಿಡಬೇಕು. ಇದು ನಿಮ್ಮನ್ನ ಒಂದು ವರ್ಷಗಳ ಕಾಲ ಆಲ್ಕೋಹಾಲ್ ಸೇವನೆಯಿಂದ ದೂರವಿರಿಸುತ್ತೆ ಅಂತಾ ಸಂಶೋಧನೆಯೊಂದು ಹೇಳಿದೆ. ಯಾಕಂದ್ರೆ ಜನವರಿ ತಿಂಗಳಲ್ಲಿ ನೀವು ಈ ನಿರ್ಧಾರವನ್ನ ಮಾಡಿದ್ದೇ ಆದಲ್ಲಿ ನೀವು ಎನರ್ಜೆಟಿಕ್ ಆಗಿ ಇರುವುದು, ಉತ್ತಮ ನಿದ್ರೆ ಮಾಡುವುದು ಹಾಗೂ ದೇಹದ ಕೊಬ್ಬಿನ ಅಂಶ ಕಡಿಮೆಯಾಗೋದು ಮಾತ್ರವಲ್ಲ ಇಡೀ ವರ್ಷ ಕುಡಿತವನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದು ಸಂಶೋಧಕರು ಹೇಳುತ್ತಾರೆ.
ಈ ಕುರಿತು ಸಸ್ಸೆಕ್ಸ್ ವಿಶ್ವವಿದ್ಯಾಲಯದ ತಂಡ ಸಂಶೋಧನೆಯೊಂದನ್ನ ನಡೆಸಿದ್ದು “ಡ್ರೈ ಜನವರಿ” ನಲ್ಲಿ ಪಾಲ್ಗೊಂಡವರು ಆಗಸ್ಟ್ ವೇಳೆಗೆ ಆಲ್ಕೋಹಾಲ್ ಸೇವಿಸುವ ಪ್ರಮಾಣವನ್ನ ಕಡಿಮೆ ಮಾಡಿದ್ದಾರೆ ಎಂದು ವರದಿ ನೀಡಿದೆ. ಮನಶಾಸ್ತ್ರಜ್ಞ ರಿಚರ್ಡ್ ಡೆ ವಿಸ್ಸರ್ ಹೇಳುವ ಪ್ರಕಾರ ಡ್ರೈ ಜನವರಿ ಫಾಲೋ ಮಾಡೋದ್ರಿಂದ 10 ಮಂದಿಯಲ್ಲಿ 09 ಮಂದಿ ಹಣ ಉಳಿಸುತ್ತಾರೆ, 10ರಲ್ಲಿ 7 ಮಂದಿ ಉತ್ತಮ ನಿದ್ರೆ ಮಾಡುತ್ತಾರೆ ಮತ್ತು 5 ಜನರಲ್ಲಿ 3 ಜನ ತೂಕ ಕಳೆದುಕೊಳ್ಳುತ್ತಾರಂತೆ.
2018ರ “ಡ್ರೈ ಜನವರಿ” ತಿಂಗಳಲ್ಲಿ 800 ಕ್ಕಿಂತ ಹೆಚ್ಚು ಜನರನ್ನು ಅಧ್ಯಯಕ್ಕೆ ಒಳಪಡಿಸಲಾಯಿತು. ಆಶ್ಚರ್ಯ ಎಂಬಂತೆ ಡ್ರೈ ಜನವರಿಯಲ್ಲಿ ಪಾಲ್ಗೊಂಡವರಲ್ಲಿ ಗಣನೀಯವಾಗಿ ಕುಡಿಯುವ ಪ್ರಮಾಣ ಕಡಿಮೆಯಾಗಿತ್ತು. ವಿಶೇಷ ಅಂದ್ರೆ ಡ್ರೈ ಜನವರಿಯಲ್ಲಿ ಭಾಗವಹಿಸಿದವರಲ್ಲಿ 93% ಜನರಲ್ಲಿ ನಾವು ಏನನ್ನೋ ಸಾಧಿಸಿದ್ದೇವೆ ಎಂಬ ಭಾವನೆ ಮೂಡಿದೆ. ಹಾಗೇ 83% ಜನರು ಹಣ ಸೇವ್ ಮಾಡಿದ್ದಾರೆ ಎಂದು ಸಂಶೋಧನೆ ಹೇಳಿದೆ. ಆಲ್ಕೋಹಾಲ್ ಬಳಕೆಯಲ್ಲಿನ ಬದಲಾವಣೆಗಳು ಇಡೀ ತಿಂಗಳು ಆಲ್ಕೊಹಾಲ್ನಿಂದ ದೂರ ಉಳಿಯಲು ಸಹಾಯ ಮಾಡುತ್ತದೆಯಂತೆ. ಇನ್ನು ಶೇ. 82 ರಷ್ಟು ಜನರು ಕುಡಿಯುವ ವೇಳೆ ಸಂಬಂಧಗಳ ಬಗ್ಗೆ ಆಳವಾಗಿ ಯೋಚಿಸಿದರಂತೆ. ಹಾಗೇ 80 ರಷ್ಟು ಜನರಿಗೆ ತಮ್ಮ ಕುಡಿತದ ಅಭ್ಯಾಸವನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದೇವೆ ಎಂಬ ಅನುಭವವಾಯಿತಂತೆ.
ಆದರೆ ಈ ಡ್ರೈಜನವರಿ ಪಾಲ್ಗೊಂಡ 76% ಜನ ನಾವು ಯಾವಾಗ, ಯಾಕೆ ಕುಡಿಯುತ್ತಿದ್ದೇವೆ ಎಂದು ತಿಳಿದುಕೊಳ್ಳಲಾರಂಭಿಸಿದ್ರು. ಹಾಗೇ 71% ಜನ ಎಂಜಾಯ್ ಮಾಡಲು ಕುಡಿತವೊಂದೇ ದಾರಿಯಲ್ಲ ಅಂತಾ ಅರಿತುಕೊಂಡರಂತೆ. ಹಾಗೇ ಅರಿತುಕೊಂಡವರಲ್ಲಿ ಆರೋಗ್ಯ ಗಣನೀಯವಾಗಿ ಸುಧಾರಿಸಿದೆ. ಇನ್ನು ಡಿ ವಿಸ್ಸರ್ ಮೂರು ಆನ್ಲೈನ್ ಸರ್ವೇಗಳ ಮೂಲಕ ಈ ಸಂಶೋಧಯನ್ನ ಪೂರ್ಣಗೊಳಿಸಿದ್ದಾರೆ. 31 ದಿನಗಳವರೆಗೆ ಆಲ್ಕೊಹಾಲ್ನಿಂದ ದೂರವಿದ್ದ ಬಳಿಕ ಮನೋರಂಜನೆಗಾಗಿ, ವಿಶ್ರಾಂತಿಗಾಗಿ ಹಾಗೂ ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಆಲ್ಕೋಹಾಲ್ ಅಗತ್ಯವಿಲ್ಲ ಎಂದು ನಮಗೆ ತೋರಿಸುತ್ತದೆ” ಎಂದು ರಿಚರ್ಡ್ ಹೇಳಿದ್ದಾರೆ.