ಕೃಷಿ ವಿವಿಯಲ್ಲಿ ವಿನೂತನ ಮತದಾನ ಜಾಗೃತಿ ಕಾರ್ಯಕ್ರಮ..!

ಧಾರವಾಡ: ಧಾರವಾಡದ ಕೃಷಿ ವಿವಿಯಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮ ವಿಶಿಷ್ಠವಾಗಿತ್ತು. ಬಾ ತಂಗಿ…. ಬಾರವ್ವ… ಬಾರೇ ರೈತನ ಮಗಳೇ ನೀ… ಮತದಾನ ಮಾಡಲು ಬಾರವ್ವ …ಎಂಬ ಆಕರ್ಷಕ ಜನಪದ ಶೈಲಿಯ ಹಾಡಿಗೆ ಶಿಕ್ಷಕರು ಕೋಲಾಟದೊಂದಿಗೆ ಹೆಜ್ಜೆ ಹಾಕುತ್ತ ಮತದಾರರನ್ನು ಮತದಾನಕ್ಕೆ ಕರೆಯುವುದು. ವಿದ್ಯಾರ್ಥಿನಿಯೊಬ್ಬಳು ವೃಕ್ಷದ ಪೋಷಾಕು ಧರಿಸಿ ಏಪ್ರೀಲ್ 23ರ ಮತದಾನದ ಸಂದೇಶ ಸಾರಿದ್ದು, ವ್ಯಂಗ್ಯ ಚಿತ್ರಗಳು, ಕರಕುಶಲ ವಸ್ತುಗಳ ಪ್ರದರ್ಶನ, ನಗೆಹನಿ, ದೃಷ್ಟಿವಿಕಲಚೇತನ ಯುವತಿಯೊಬ್ಬಳು ಕೊಳಲುವಾದನದೊಂದಿಗೆ ಚುನಾವಣೆಯ ಮಹತ್ವವನ್ನು ಬಿಡಿಸಿಡುವ ಮೂಲಕ ಚಿತ್ತಾಕರ್ಷಕ ರೀತಿಯಲ್ಲಿ ನಡೆದ ಮತದಾರರ ಜಾಗೃತಿ ಅಭಿಯಾನಕ್ಕೆ ಇಂದು ನಗರದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರ ಸಾಕ್ಷಿಯಾಯಿತು. ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಚುನಾವಣಾ ಸಹಭಾಗಿತ್ವ (ಸ್ವೀಪ್) ಸಮಿತಿ, ಜಿಲ್ಲಾ ಪಂಚಾಯತಿ, ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಮತದಾರರ ಜಾಗೃತಿ, ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮಗಳು ಜರುಗಿದವು.
ಧಾರವಾಡ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ವತಃ ತಯಾರಿಸಿದ್ದ ಮತದಾರರ ಜಾಗೃತಿ ಸಂದೇಶ ಹೊತ್ತ ಕಾಗದದ ಟೊಪ್ಪಿಗೆಗಳನ್ನು ಧರಿಸಿದ್ದ ಶಿಕ್ಷಕರರು ಸಭಾಂಗಣಕ್ಕೆ ವಿಶಿಷ್ಠ ಕಳೆ ತಂದುಕೊಟ್ಟಿದ್ದವು. ದೃಷ್ಟಿವಿಕಲಚೇತನರಾದ ಕೃತ್ತಿಕಾ ಜಂಗಲಿಮಠ ಅವರು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಿಗೇರ ಅವರು ರಚಿಸಿದ ಚುನಾವಣಾ ಜಾಗೃತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರಲ್ಲದೇ ಬಾನ್ಸುರಿ ವಾದನ ಮೂಲಕ ಸಂತ ಶಿಶುನಾಳ ಶರೀಫರ ತತ್ವಪದಗಳನ್ನು ನುಡಿಸಿ ನೆರೆದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು. ಅಳ್ನಾವರದ ಎಇಎಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ರಮ್ಯಾ ಕುಬಸದ ವೃಕ್ಷ ಮಾತೆಯ ಪೋಷಾಕಾ ಧರಿಸಿ,ಟೊಂಗೆ,ಎಲೆಗಳ ಮೇಲೆ ಚುನಾವಣಾ ಜಾಗೃತಿ ಸಂದೇಶಗಳನ್ನು ಸಾರಿದ್ದು ವಿಶೇಷವಾಗಿತ್ತು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv