ಪ.ಬಂಗಾಳದಲ್ಲಿ ಹಿಂಸಾಚಾರ, ವಿದ್ಯಾಸಾಗರ್ ಪ್ರತಿಮೆ ಧ್ವಂಸದ ಬಗ್ಗೆ ಸಾಕ್ಷಿ ಸಮೇತ ಶಾ ಪ್ರಶ್ನೆ

ನವದೆಹಲಿ: ನಿನ್ನೆ ಕೊಲ್ಕತ್ತಾದಲ್ಲಿ ರೋಡ್ ಶೋ ವೇಳೆ ಗುಂಪುಘರ್ಷಣೆ ನಡೆದ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಕೃತ್ಯವನ್ನ ಬಿಜೆಪಿ ನಡೆಸಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅವರಿಗೆ ನಾನು ಹೇಳಲು ಬಯಸ್ತೀನಿ, ನಾವು ದೇಶದ ಪ್ರತಿ ರಾಜ್ಯದಲ್ಲೂ ಚುನಾವಣೆ ಎದುರಿಸುತ್ತಿದ್ದೇವೆ. ನೀವು ಪಶ್ಚಿಮ ಬಂಗಾಳದ 42 ಸೀಟ್​ಗಳಲ್ಲಿ ಮಾತ್ರ ಸ್ಪರ್ಧಿಸಿರೋದು. 6 ಹಂತಗಳ ಚುನಾವಣೆಯಲ್ಲಿ ಬೇರೆ ಎಲ್ಲೂ ಹಿಂಸಾಚಾರ ನಡೆದಿಲ್ಲ., ಪಶ್ಚಿಮ ಬಂಗಾಳದಲ್ಲಿ ಮಾತ್ರ ನಡೆದಿದೆ. ಇದಕ್ಕೆ ಟಿಎಂಸಿ ಕಾರಣ ಅನ್ನೋದು ಇದರಿಂದ ಸಾಬೀತಾಗಿದೆ ಎಂದು ಹರಿಹಾಯ್ದರು.
ನಿನ್ನೆ ಮೂರು ಕಡೆ ಘರ್ಷಣೆ ನಡೆದಿದೆ. ಮಮತಾ ಬ್ಯಾನರ್ಜಿ ಬೆಂಬಲಿಗರು ನನ್ನ ಪೋಸ್ಟರ್​​ಗಳನ್ನ ಹರಿದುಹಾಕಿದ್ದಾರೆ. ಹಲವೆಡೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಪೊಲೀಸರು ಮೂಕಪ್ರೇಕ್ಷಕರಾಗಿದ್ರು ಎಂದು ಹೇಳಿದ್ರು

ಇನ್ನು ಗಲಾಟೆ ನಡೆದು ವಸ್ತುಗಳು ಧ್ವಂಸವಾಗಿರೋ ಫೋಟೋಗಳನ್ನ ತೋರಿಸಿದ ಅಮಿತ್​ ಶಾ ವಿಶ್ವವಿದ್ಯಾಲಯದ ಗೇಟ್​ ಬಂದ್ ಆಗಿದ್ದರೂ ಈಶ್ವರ್​ಚಂದ್ರ ವಿದ್ಯಾಸಾಗರ್​ ಅವರ ಪ್ರತಿಮೆ ಧ್ವಂಸ ಮಾಡಿದ್ದು ಯಾರು? ಬಿಜೆಪಿಯವರು ಆಗ ಒಳಗೆ ಇರಲಿಲ್ಲ. ಟಿಎಂಸಿ ಕಾರ್ಯಕರ್ತರು ಒಳಗಿದ್ದರು. ಅಲ್ಲದೆ ಗೇಟ್ ಕೂಡ​​ ಮುರಿದಿಲ್ಲ. ಹಾಗಾದ್ರೆ ಪ್ರತಿಮೆ ಮುರಿದಿದ್ದು ಯಾರು? ಎಂದು ಪ್ರಶ್ನಿಸಿದ್ರು.

7 ಗಂಟೆ ನಂತರ ಕಾಲೇಜು ಬಂದ್​ ಆಗಿತ್ತು. ರೂಮ್​ಗಳು ಕೂಡ ಲಾಕ್ ಆಗಿದ್ದವು. ಆದ್ರೂ ಒಳಗಡೆ ಇದ್ದ ವಸ್ತುಗಳು ಹೇಗೆ ಧ್ವಂಸವಾದವು? ಬಿಜೆಪಿ ಕಾರ್ಯಕರ್ತರ ಕೈಗೆ ರೂಮ್​ಗಳ ಕೀ ಬರಲು ಹೇಗೆ ಸಾಧ್ಯ. ಇದೆಲ್ಲಾ ಟಿಎಂಸಿ ಕಾರ್ಯಕರ್ತರ ಕೃತ್ಯ ಎಂದು ಹೇಳಿದ್ರು. ಮಮತಾ ದೀದಿ ಇದಕ್ಕೆಲ್ಲಾ ಬಿಜೆಪಿ ಹೆದರುವುದಿಲ್ಲ. ಚುನಾವಣಾ ಫಲಿತಾಂಶದವರೆಗೆ ಕಾದು ನೋಡಿ ಎಂದು ಹೇಳಿದ್ರು.

 

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv