ಜೋಶಿ ಎಂಬ ದುಷ್ಟ ಶಕ್ತಿಯ ಸೋಲಿಸಲು ಚುನಾವಣೆಗೆ ನಿಂತಿದ್ದೇನೆ: ವಿನಯ್ ಕುಲಕರ್ಣಿ

ಹುಬ್ಬಳ್ಳಿ: ನಾನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೆ. ನನಗೆ ಮತ್ತೆ ಏಲೆಕ್ಷನ್ ನಿಲ್ಲೋಕೆ ಇಷ್ಟವಿರಲಿಲ್ಲ. ಆದ್ರೆ ಪ್ರಲ್ಹಾದ್​​ ಜೋಶಿ ಎಂಬ ದುಷ್ಟ ಶಕ್ತಿಯನ್ನು ಸೋಲಿಸೋಕೆ ಈಗ ಲೋಕಸಭೆ ಚುನಾವಣೆಗೆ ನಿಂತಿದ್ದೇನೆ ಎಂದು ಹುಬ್ಬಳ್ಳಿಯ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ್ ಕುಲಕರ್ಣಿ ಹೇಳಿಕೆ ನೀಡಿದ್ದಾರೆ.

ಮಹದಾಯಿ ವಿಚಾರದಲ್ಲಿ ನಾವು ಮೋದಿಯನ್ನ ಭೇಟಿ ಮಾಡಿದ್ದೆವು. ಆದ್ರೆ ಅಲ್ಲಿ ಬಿಜೆಪಿ ರಾಜ್ಯ ನಾಯಕರು ಯಾರೂ ತುಟಿ ಪಿಟಿಕ್ ಅನ್ನಲಿಲ್ಲ. ಹೈಕಮಾಂಡ್ ಎದುರು ಮಾತನಾಡೋಕೆ ಆಗೊಲ್ಲ ಎಂದ್ರೆ ಲೀಡರ್ ಯಾಕೆ‌ ಆಗಬೇಕು? ಅದು ನಮ್ಮ ಕೈಯಿಂದ ಆಗಲ್ಲ. ಅಧಿಕಾರ ಬರುತ್ತೆ, ಹೋಗುತ್ತೆ, ನಾವು ಪ್ರತಿನಿಧಿಸೋ ಕ್ಷೇತ್ರದ ಜನರ ಆಶೋತ್ತರಗಳನ್ನ ಈಡೇರಿಸೋ ನಾಯಕನಾಗಬೇಕು. ಜೋಶಿಯವರೇ ಹುಬ್ಬಳ್ಳಿ ರೈಲು ನಿಲ್ದಾಣ ಮಾಡಿದ್ದು ಎಂದು ಎಂಎಲ್ ಎ ಅರವಿಂದ ಬೆಲ್ಲದ್ ಹೇಳ್ತಾರೆ. ಹುಬ್ಬಳ್ಳಿ ರೈಲು‌ ನಿಲ್ದಾಣ ಆದಾಗ ಇನ್ನೂ ಹುಟ್ಟಿರಲೇ ಇಲ್ಲ ಎಂದು ಬಿಜೆಪಿಯವರ ವಿರುದ್ಧ ವಿನಯ್, ವಾಗ್ದಾಳಿ ನಡೆಸಿದ್ರು.

ನಮಗೆ ಕೆಲವೊಂದು ನೂನ್ಯತೆಗಳಿವೆ. ಅದನ್ನ ನಾವು ಒಪ್ಪಿಕೊಳ್ಳಬೇಕು. ನಮಗೆ ಸುಳ್ಳು ಹೇಳೋಕೆ ಬರೋದಿಲ್ಲ‌. ನಮಗೆ ಭಾಷಣ ಮಾಡೋಕೆ ಬರೋದಿಲ್ಲ. ಆದ್ರೆ, ಇವೆಲ್ಲಾ ಕಲೆಗಳು ಬಿಜೆಪಿಯವರಿಗೆ ಕರಗತವಾಗಿವೆ. ನೀವು ಇದನ್ನ ಕಲಿಯಬೇಕು, ನೀರಾವರಿ ‌ಇಲಾಖೆಗೆ ಕೇಂದ್ರದಿಂದ ಹೆಚ್ಚಿನ ಅನುದಾನ ಬರಲಿಲ್ಲ. ನಮ್ಮ ರಾಜ್ಯದ ಬಿಜೆಪಿ ಸಂಸದರೇನು ಸಂಸತ್ ನಲ್ಲಿ‌ ಮಲಗಿದ್ರಾ.. ಎಂದು ಹುಬ್ಬಳ್ಳಿಯಲ್ಲಿ ನಡೆದ ಮೈತ್ರಿ ಪಕ್ಷದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ವಿನಯ್ ಕುಲಕರ್ಣಿ ವಾಗ್ದಾಳಿ ನಡೆಸಿದ್ರು.