ಮಕ್ಕಳ ಕಳ್ಳರಿಲ್ಲ ಅಂತ ಪೊಲೀಸರು ಹೇಳ್ತಿದ್ರೂ, ಜನರ ಭಯ ಕಮ್ಮಿಯಾಗಿಲ್ಲ..!

ಯಾದಗಿರಿ: ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ಮಕ್ಕಳ ಕಳ್ಳರು ಬಂದಿದ್ದಾರೆಂಬ ಸುಳ್ಳು ವದಂತಿ ಕಾಡ್ಗಿಚ್ಚಿನಂತೆ ಆವರಿಸಿದೆ. ಯಾದಗಿರಿ ಜಿಲ್ಲೆಯ ಗೂಗಿ, ಗುಂಜಾಳ ಹಾಗೂ ಖಾನಾಪೂರ ಸೇರಿದಂತೆ ವಿವಿಧ ಗ್ರಾಮದಲ್ಲಿ 3-4 ದಿನಗಳ ಹಿಂದೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಸುಳ್ಳು ವದಂತಿಗೆ ಜನ ಭಯಪಟ್ಟಿದ್ರು. ಇದಕ್ಕೆ ಕೆಲವು ಅಮಾಯಕರು ಬಲಿಯಾಗಿ ಗ್ರಾಮಸ್ಥರಿಂದ ಗೂಸಾನೂ ತಿಂದಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಯಾದಗಿರಿ ಪೋಲಿಸರು ಅಂಥ ಯಾವ ಘಟನೆಯೂ ಜಿಲ್ಲೆಯಲ್ಲಿ ನಡೆದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ವದಂತಿಗಳಿಗೆ ಯಾರು ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳವುದಾಗಿ ತಿಳಿಸಿದ್ದಾರೆ. ಆದರೂ ಸಹ ಗ್ರಾಮಸ್ಥರು ಭಯಭೀತರಾಗಿ ತಮ್ಮ ತಮ್ಮ ಊರುಗಳಲ್ಲಿ ಮನೆಗೊಬ್ಬ ಪುರುಷ ರಾತ್ರಿ ಇಡೀ ಬಡಿಗೆ, ಕೊಡಲಿ ಮುಂತಾದ ಶಸ್ತ್ರಗಳನ್ನಿಡಿದು ತಮ್ಮ ಗ್ರಾಮದ ರಕ್ಷಣೆಯಲ್ಲಿ ತೊಡಗಿದ್ದಾರೆ. ಗ್ರಾಮದಲ್ಲಿ ಗುಂಪು ಗುಂಪಾಗಿ ರಾತ್ರಿ 12 ರಿಂದ ಬೆಳಿಗ್ಗೆ 4 ಗಂಟೆಯವರೆಗೆ ತಮ್ಮ ಗ್ರಾಮದ ಪ್ರಮುಖ ಬೀದಿ, ಬಸ್ ಸ್ಟ್ಯಾಂಡ್ ಮುಂತಾದ ಸ್ಥಳಗಳಲ್ಲಿ ಆಟೋ, ಬೈಕ್ ಮತ್ತು ಕಾಲ್ನಡಿಗೆಯಲ್ಲಿ ಗ್ರಾಮ ಸುತ್ತಿ ತಮ್ಮ ಗ್ರಾಮವನ್ನು ತಾವೇ ರಕ್ಷಣೆ ಮಾಡುತ್ತಿದ್ದಾರೆ. ಯಾರಾದ್ರೂ ಅನುಮಾನಸ್ಪದ ವ್ಯಕ್ತಿಗಳು ಕಂಡರೆ ಅವರ ಮೇಲೆ ಏಕಾಏಕಿ ಹಲ್ಲೆ ಮಾಡುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv