ಭೀಮಾತೀರದ ನಕಲಿ ಎನ್​​ಕೌಂಟರ್​ ಪ್ರಕರಣ: ನಾಳೆ ಆರೋಪಿ ಮಹಾದೇವ ಅರ್ಜಿ ವಿಚಾರಣೆ

ವಿಜಯಪುರ: ಭೀಮಾತೀರದ ಹಂತಕ ಧರ್ಮರಾಜ‌ ನಕಲಿ ಎನ್‌ಕೌಂಟರ್ ಹಾಗೂ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಳೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾಹುಕಾರ ಬೈರಗೊಂಡ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಜಾಮೀನು ಅರ್ಜಿ ವಿಚಾರಣೆ ಕಲಬುರಗಿ ಹೈಕೋರ್ಟ್‌ ಪೀಠದಲ್ಲಿ ನಡೆಯಲಿದೆ. ನ್ಯಾಯಾಧೀಶ ಕೆ.ಸೋಮಶೇಖರ್ ಜಾಮೀನು ಅರ್ಜಿ ವಿಚಾರಣೆ ನಡೆಸಲಿದ್ದು, ಆರೋಪಿ ಪರ ಸಿ.ವಿ ನಾಗೇಶ್ ವಾದ ಮಂಡಿಸಲಿದ್ದಾರೆ. ಅರ್ಜಿ ವಿಚಾರಣೆ ಬಳಿಕ ಜಾಮೀನು ಮಂಜೂರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಳೆದ 2017 ಅಕ್ಟೋಬರ್ 30 ರಂದು ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಎನ್​ಕೌಂಟರ್ ನಡೆದಿತ್ತು. ಅದೇ ದಿನ ಧರ್ಮನ ಸಹೋದರ ಗಂಗಾಧರನನ್ನ ಪೊಲೀಸರು ಮಹಾದೇವ ಬೈರಗೊಂಡ ಗ್ಯಾಂಗ್‌ಗೆ ನೀಡಿದ ಆರೋಪವಿತ್ತು. ಈ ಹಿನ್ನೆಲೆ ಧರ್ಮ‌ನ ತಾಯಿ ಗಂಗಾಧರನನ್ನು ಹುಡುಕಿಕೊಡುವಂತೆ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಹಾಕಿದ್ದರು. ನಂತರ ಚಡಚಣ ಸಹೋದರರ ಹತ್ಯೆ ಬಯಲಿಗೆ ಬಂದಿತ್ತು. ಪ್ರಕರಣದಲ್ಲಿ ಮಹದೇವ ಸಾಹುಕಾರ್ ಬೈರಗೊಂಡ ಕಿಂಗ್ ಪಿನ್ ಆಗಿದ್ದ ಎಂಬ ಆರೋಪವಿದೆ. ಆಗಿನ ಚಡಚಣ ಪಿಎಸ್ಐ ಗೋಪಾಲ್ ಹಳ್ಳೂರ್, ಸಿಪಿಐ ಎಂ.ಬಿ ಅಸೋಡೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv