ಐತಿಹಾಸಿಕ ಗಗನ ಮಹಲ್​ಗೆ ಪುರಾತನ ಗಾರೆ ಪದ್ಧತಿಯಿಂದ ಮರುಜೀವಕ್ಕೆ ಸಿದ್ಧತೆ

ಕೊಪ್ಪಳ: ವಿಜಯನಗರ ಶ್ರೀಕೃಷ್ಣದೇವರಾಯ ಸಾಮ್ರಾಜ್ಯ ಆನೆಗೊಂದಿಯಲ್ಲಿರುವ ಐತಿಹಾಸಿಕ ಗಗನ ಮಹಲ್​ಗೆ ಮರುಜೀವ ನೀಡಲಾಗುತ್ತಿದೆ. ಪುರಾತನ ಗಾರೆ ಪದ್ಧತಿಯನ್ನ ಬಳಸಿ ಗಗನ ಮಹಲ್​​ ಮರು ನಿರ್ಮಾಣ ಮಾಡಲಾಗುತ್ತಿದೆ.

ಪುರಾತನ ಗಾರೆ ಪದ್ಧತಿ ಸಿಮೆಂಟ್ ತಯಾರಿ
ಆನೆಗೊಂದಿಯ ಗಗನ ಮಹಲ್​ಗೆ ಸಿಮೆಂಟ್ ಲೇಪನ ಮಾಡುವ ಬದಲು ಗಾರೆಯನ್ನು ಬಳಸಿ ಸುಣ್ಣ ಮರಳು ಕಲಿಸಿ ಸಿಮೆಂಟ್ ತಯಾರಿಸಲಾಗುತ್ತಿದೆ. ಗಾರೆ ಮಾಡೋದು ಒಂದು ರೀತಿ ಹಿಟ್ಟಿನ ಗಿರಿಣಿಯಲ್ಲಿ ದವಸ ಧಾನ್ಯಗಳನ್ನು ಬೀಸಿದಂತೆ. ಇದಕ್ಕಾಗಿ ಜೋಡೆತ್ತು ಬಳಸಲಾಗುತ್ತದೆ. ಅದಕ್ಕೆ ಒಂದು ಬೀಸಕಲ್ಲು ಹಾಗೂ ತಗಡಿನ ಶೀಟ್ ಅಳವಡಿಸಲಾಗಿತ್ತದೆ. ಮಧ್ಯದಲ್ಲಿ ಒಂದು ಕೋಲು ಬಳಸಿ ಬಿಸಕಲ್ಲಿಗೆ ಜೋಡಿಸಲಾಗಿರುತ್ತದೆ. ಈ ಪದ್ದತಿ ಒಂದು ರೀತಿಯಲ್ಲಿ ಹೊಲದಲ್ಲಿ ನೇಗಿಲು ಬಳಸಿ ಭೂಮಿಯನ್ನು ಹದಮಾಡುವ ಪದ್ಧತಿ ಇದ್ದಂತೆ. ಕ್ಲಾಕ್ ಮಾದರಿಯ ವೃತ್ತಾಕಾರದಲ್ಲಿ ಇರುವ ಈ ಗಾರೆಗೆ ಸುತ್ತಮುತ್ತ 3 ಅಡಿಯಷ್ಟು ಕುಣಿಯನ್ನು ನಿರ್ಮಿಸಲಾಗಿರುತ್ತದೆ. ಅದರಲ್ಲಿ ಮರಳು ಸುಣ್ಣ ಹಾಕಲಾಗುತ್ತದೆ. ಜೋಡಿ ಎತ್ತುಗಳು ಸುಮಾರು 20 ನಿಮಿಷಗಳ ಕಾಲ 29ರಿಂದ 30 ಸುತ್ತು ತಿರುಗುತ್ತವೆ. ಇದರಿಂದ 12 ಚೀಲದಷ್ಟು ಸುಣ್ಣದ ಲೇಪನ (ಲಪಮ್) ತಯಾರಾಗುತ್ತದೆ. ದಿನಕ್ಕೆ 40 ಚೀಲದಷ್ಟು ಸುಣ್ಣದ ಲೇಪನವನ್ನು ತಯಾರಿಸಲಾಗುತ್ತದೆ. ಇಂತಹ ತಂತ್ರಜ್ಞಾನ ಯುಗದಲ್ಲಿ ಈ ಪದ್ದತಿ ಉಳಿದಿರುವುದು ನಮ್ಮ ಹಳೆ ಪದ್ಧತಿ ಶ್ರಮಿಕ ಕಾಯಕವನ್ನು ತೋರಿಸುತ್ತದೆ.