‘ಬರೀ ಕುಮಾರಸ್ವಾಮಿ ಮಕ್ಕಳು, ಮೊಮ್ಮಕ್ಕಳು ಅವರೇ ಎಂ‌ಎಲ್ಎ ಆಗಬೇಕಾ?’

ಧಾರವಾಡ: ವಿಧಾನಸೌಧಕ್ಕೆ ಮೊದಲಿದ್ದಷ್ಟು ಪಾವಿತ್ರ್ಯತೆ ಈಗ ಇಲ್ಲ. ಅದೊಂದು‌ ಬಿಗ್ ಬಜಾರ್ ರೀತಿಯ ಸಂತೆಯ ಮಾರ್ಕೆಟ್ ಆಗಿ ಬಿಟ್ಟಿದೆ. ಅಲ್ಲಿ ಅಧಿಕಾರವನ್ನು ಯಾರು ಬೇಕಾದರೂ ಹಣ ಕೊಟ್ಟು ಪಡೆಯಹುದಾಗಿದೆ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ನಡೆದ ಪ್ರತ್ಯೇಕ ರಾಜ್ಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಕಾಲದಲ್ಲಿಯೂ ಮುಠ್ಠಾಳ ರಾಜಕಾರಣಿಗಳು ಇದ್ದೇ ಇರುತ್ತಾರೆ. ಈಗ ಮುಠ್ಠಾಳರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಇದರ ಮಧ್ಯೆ ನಮ್ಮ ನಾಡಿನಲ್ಲಿ ಯುವಕರ ಶಕ್ತಿ ಹೆಚ್ಚಿದೆ.
ಯುವಕರು ರಾಜಕೀಯವಾಗಿ ಬೆಳೆದು ಎಂಎಲ್‌ಗಳು ಆಗಬೇಕು. ಬರೀ ಕುಮಾರಸ್ವಾಮಿ ಮಕ್ಕಳು, ಮೊಮ್ಮಕ್ಕಳು ಅವರೇ ಎಂ‌ಎಲ್ಎ ಆಗಬೇಕಾ? ಅಥವಾ ಬಂಗಾರಪ್ಪರ ಮಕ್ಕಳೇ ಎಂಎಲ್‌ಎ ಗಳಾಗಬೇಕಾ? ರಾಜಕಾರಣ, ವಿಧಾನಸಭೆ ಅಂದ್ರೆ ಅವರಪ್ಪನ ಮನೆ ಆಸ್ತಿಯೇ ಎಂದು ಸಾಹಿತಿ ಕುಂ.ವೀ. ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.
ಸಾಹಿತಿಯಾಗಿರುವ ನನಗೂ ಎಲೆಕ್ಷನ್ ನಿಲ್ಲೋದಕ್ಕೆ ಆಸೆ ಇದೆ. ಬರೀ ಅವರೇ ತುಂಬಿಕೊಂಡು ಬಿಟ್ರೇ ನಮ್ಮಂಥವರು ಎಲ್ಲಿ ಹೋಗಬೇಕು. ಜನಪರ ಕೆಲಸ ಮಾಡೋಕೆ ನಮಗೂ ಅವಕಾಶಗಳು ಸಿಗಬೇಕು. ಈ ನಿಟ್ಟಿನಲ್ಲಿ ಪ್ರಶ್ನಿಸುವುದನ್ನು ನಮ್ಮ ಯುವಕರು ಕಲಿಯಬೇಕು. ಜನಪ್ರತಿನಿಧಿಗಳು ತಪ್ಪು ಮಾಡಿದಾಗ ಅವರ ಕೊರಳ ಪಟ್ಟಿ ಹಿಡಿದು ಕಪಾಳಕ್ಕೆ ಹೊಡೆಯುವ ಅಧಿಕಾರ ಜನರಿಗೆ ಕೊಡಬೇಕಿದೆ ಎಂದು ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv