ರಕ್ಷಣೆಗಾಗಿ ಪೊಲೀಸರ ಮೊರೆ ಹೋದ ರಂಗೀಲಾ ಬೆಡಗಿ..!

ಲಕ್ನೋ: ನನಗೆ ರಕ್ಷಣೆ ನೀಡಿ ಅಂತಾ ನಟಿ ಕಮ್​ ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಪೊಲೀಸರ ಮೊರೆ ಹೋಗಿದ್ದಾರೆ. ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಊರ್ಮಿಳಾ ಮಾತೋಂಡ್ಕರ್ ಕೆಲವು ದಿನಗಳ ಹಿಂದೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸ್ತಿದ್ದರು. ಈ ವೇಳೆ ಕೆಲವು ಬಿಜೆಪಿ ಬೆಂಬಲಿಗರು ಮೋದಿ ಮೋದಿ ಅಂತಾ ಘೋಷಣೆ ಕೂಗಿದ್ರು. ಇದ್ರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಗಲಾಟೆ ಆರಂಭವಾಗಿ, ಎರಡೂ ಪಕ್ಷದ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಊರ್ಮಿಳಾ ಇದು ಕೇವಲ ಆರಂಭವಷ್ಟೇ ಮುಂದಿನ ದಿನಗಳಲ್ಲಿ ಇದು ಹಿಂಸಾತ್ಮಕ ರೂಪ ಪಡೆಯಬಹುದು. ಇದ್ರಿಂದ ನನ್ನ ಪ್ರಾಣಕ್ಕೆ ಅಪಾಯವಿರುವ ಕಾರಣ ಪೊಲೀಸ್ ರಕ್ಷಣೆ ಕೋರಿದ್ದೇನೆ. ಜೊತೆಗೆ ಬಿಜೆಪಿ ಬೆಂಬಲಿಗರ ವಿರುದ್ಧ ದೂರು ದಾಖಲಿಸಿದ್ದೇನೆ ಅಂತಾ ಹೇಳಿದ್ದಾರೆ. ಈ ಹಿನ್ನೆಲೆ ಚುನಾವಣೆ ಮುಗಿಯುವವರೆಗೆ ಊರ್ಮಿಳಾ ಮಾತೋಂಡ್ಕರ್​ಗೆ ಭದ್ರತೆ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ. ಇನ್ನು ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಗೋಪಾಲ್ ಶೆಟ್ಟಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.