ಭವಿಷ್ಯದಲ್ಲಿ ವಿಷಯಾಧಾರಿತ ರಾಜಕಾರಣಕ್ಕೆ ಬೆಲೆ ಬರಲಿದೆ. ಅದಕ್ಕಾಗಿ ಹೋರಾಟ-ಉಪೇಂದ್ರ

ಧಾರವಾಡ: ರಾಜಕೀಯ ಎನ್ನುವ ವ್ಯವಸ್ಥೆ ಬಂಡವಾಳ ಹೂಡಿ ಬಂಡವಾಳ ತೆಗೆಯುವ ಒಂದು ಪ್ರವೃತ್ತಿಯಾಗಿದೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ನಟ ಉಪೇಂದ್ರ ಹೇಳಿದರು. ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಂತೋಷ ನಂದೂರ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಬಳ್ಳಾರಿ ಒಂದನ್ನು ಹೊರತುಪಡಿಸಿ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಅಭ್ಯರ್ಥಿಗಳನ್ನು ಕೆಲ ಮಾನದಂಡಗಳ ಮೇಲೆ ಆಯ್ಕೆ ಮಾಡಲಾಗಿದೆ ಎಂದರು. ಇಂದಿನ ರಾಜಕೀಯ ವ್ಯವಸ್ಥೆ ದುಡ್ಡಿನ ಮೇಲೆ ನಿಂತಿದೆ. ನಮ್ಮ ಪಕ್ಷ ಯಾವುದೇ ಆಡಂಬರದಿಂದ ಕೂಡಿಲ್ಲ. ಜಾಹೀರಾತುಗಳಿಲ್ಲ. ಮೆರವಣಿಗೆಗಳಿಲ್ಲ. ನಾವು ನೇರವಾಗಿ ಜನರನ್ನು ತಲುಪುವ ಕೆಲಸ ಮಾಡುತ್ತಿದ್ದೇವೆ. ಹೋದ ಕಡೆಗಳಲ್ಲೆಲ್ಲ ಜನರಿಂದ ಉತ್ತಮ ಬೆಂಬಲ ಸಿಗುತ್ತಿದೆ. ಬದಲಾವಣೆ ಆಗಬೇಕು ಎನ್ನುತ್ತಿದ್ದಾರೆ ಎಂದರು. ವ್ಯಾಪಾರೀಕರಣದ ರಾಜಕಾರಣ ಕೊನೆಗಾಣಿಸಿ, ಜನಪರವಾಗಿ ಸೇವೆ ಮಾಡುವ ವೃತ್ತಿಪರ ರಾಜಕೀಯ ಜಾರಿ ಮಾಡುವುದು ಉತ್ತಮ ಪ್ರಜಾಕೀಯ ಪಕ್ಷದ ಉದ್ದೇಶವಾಗಿದೆ.
ಈಗಿನ ರಾಜಕಾರಣ ಬಿಜಿನೆಸ್ ಆಗಿದೆ. ಹಣ ಹಾಕಿ, ಹಣ ತೆಗೆಯುವುದಾಗಿದೆ. ಇದು ತೊಲಗಬೇಕು. ಬದಲಿಗೆ ಸ್ವಂತ ಹಣವನ್ನು ತಂದು ಸಮಾಜ ಸೇವೆ ಮಾಡುವ ಶಿಸ್ತುಬದ್ಧ ರಾಜಕೀಯ ವೃತ್ತಿಯನ್ನು ಕಟ್ಟಬೇಕಿದೆ ಎಂದರು. ಜಾತಿ, ಹಣ ಈಗಿನ ರಾಜಕೀಯ ಮತ್ತು ಚುನಾವಣೆಯ ಪ್ರಮುಖ ಅಸ್ತ್ರಗಳು. ಇದನ್ನು ಹೊರತುಪಡಿಸಿದ ವಿಚಾರಗಳ ಮೇಲೆ ಚುನಾವಣೆ ನಡೆಯಬೇಕು. ಭವಿಷ್ಯದಲ್ಲಿ ವಿಷಯಾಧಾರಿತ ರಾಜಕಾರಣಕ್ಕೆ ಬೆಲೆ ಬರಲಿದೆ. ಅದಕ್ಕಾಗಿ ಕೊನೆವರೆಗೂ ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ ಅಂತ ಶಪತ ಮಾಡಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv