ಸಚಿವರಿಗೆ ತಿಂಡಿ ಬಡಿಸಲು ಇರೋದಾ ಸರ್ಕಾರಿ ನೌಕರರು..?

ಲಕ್ನೌ: ಸರ್ಕಾರಿ ಅಧಿಕಾರಿಗಳು ಇರೋದು ಜನರ ಕೆಲಸ ಮಾಡಿಕೊಡುವುದಕ್ಕೋ ಅಥವಾ ಜನ ಪ್ರತಿನಿಧಿಗಳ ಕೆಲಸ ಮಾಡಿಕೊಡುವುದಕ್ಕೋ ಅನ್ನೋ ಅನುಮಾನ ಸಾಮಾನ್ಯರನ್ನ ಕಾಡ್ತಿದೆ. ಇದಕ್ಕೆ ಕಾರಣ ಉತ್ತರಪ್ರದೇಶದಲ್ಲಿ ಸರ್ಕಾರಿ ಅಧಿಕಾರಿಗಳನ್ನ ನಡೆಸಿಕೊಂಡ ರೀತಿ.
ಉತ್ತರಪ್ರದೇಶದ ಸಚಿವರೊಬ್ಬರಿಗೆ ಬೆಳಗಿನ ಉಪಹಾರ ಬಡಿಸೋಕೆ ಅಂತಲೇ ಅಧಿಕಾರಿಗಳೂ ಸೇರಿದಂತೆ 10 ಮಂದಿ ಸರ್ಕಾರಿ ನೌಕರರನ್ನ ನೇಮಿಸಲಾಗಿತ್ತು. ಈ ಬಗ್ಗೆ ಸಹಾಯಕ ಆಯುಕ್ತರೇ ಆದೇಶ ಕೂಡ ಹೊರಡಿಸಿದ್ದರು. ಸಚಿವ ಮುಕುಟ್ ಬಿಹಾರಿ ವರ್ಮಾ ಮೇ 4ರಂದು ಜಿಲ್ಲೆಯ ಸರ್ಕ್ಯೂಟ್ ಹೌಸ್​​ಗೆ ಅಧಿಕೃತ ಭೇಟಿ ನೀಡಿದ್ದರು. ಆಗ ಅವರ ಸೇವೆಗೆಂದೇ 10 ಸರ್ಕಾರಿ ಸಿಬ್ಬಂದಿಯನ್ನ ನೇಮಿಸಿ ಆದೇಶ ಹೊರಡಿಸಲಾಗಿತ್ತು. ಆದೇಶ ಹಳೆಯದಾದ್ರೂ ಈಗ ವೈರಲ್ ಆಗಿದೆ.
ಆದ್ರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ವರ್ಮಾ, ನಾನು ಸರ್ಕ್ಯೂಟ್ ಹೌಸ್​​ಗೆ ಭೇಟಿ ನೀಡಬೇಕಿತ್ತು. ಆದ್ರೆ, ಅಂದು ಅಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಅಲ್ಲದೆ, ಈ ರೀತಿಯ ಆದೇಶದ ಬಗ್ಗೆಯೂ ನನಗೆ ಗೊತ್ತಿರಲಿಲ್ಲ. ಈಗ ಇದು ವೈರಲ್ ಆದಮೇಲೆಯೇ ನನಗೂ ತಿಳಿದಿದ್ದು ಅಂತ ಹೇಳಿದ್ದಾರೆ.