ಎಸ್​ಪಿ, ಬಿಎಸ್​ಪಿ ಮೈತ್ರಿಯು ಜಾತಿ ಆಧಾರಿತವಾಗಿದೆ: ಯೋಗಿ ಆದಿತ್ಯನಾಥ್​

ಲಕ್ನೋ : ಲೋಕ ಸಮರ ಸಮೀಪಿಸುತ್ತಿದ್ದಂತೆ ರಾಷ್ಟ್ರ ರಾಜಕಾರಣದಲ್ಲಿ ಬಸಿಬಿಸಿ ಚರ್ಚೆಗಳು ಶುರುವಾಗಿವೆ. ಇನ್ನು ಈ ನಡುವೆಯೇ ಉತ್ತರ ಪ್ರದೇಶದಲ್ಲಿ ಎಸ್​ಪಿ ಮತ್ತು ಬಿಎಸ್​ಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸಲು ಮುಂದಾಗಿವೆ. ಈ ಮೈತ್ರಿ ಬಗ್ಗೆ ಬಿಜೆಪಿ ವಲಯದಿಂದ ಕುಟುಕು ಮಾತುಗಳು ಕೇಳಿ ಬರುತ್ತಿವೆ. ಇನ್ನು ಈ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಪ್ರತಿಕ್ರಿಯಿಸಿದ್ದು, ಲೋಕ ಸಮರಕ್ಕಾಗಿ ಮಾಡಿಕೊಂಡಿರುವ ಎಸ್​ಪಿ ಮತ್ತು ಬಿಎಸ್​ಪಿ ಮೈತ್ರಿಯನ್ನು ಬಿಜೆಪಿ ಸಮರ್ಥವಾಗಿ ಎದುರಿಸುತ್ತದೆ ಎಂದು ಹೇಳಿದ್ದಾರೆ. ಎಸ್​ಪಿ ಮತ್ತು ಬಿಎಸ್​ಪಿ ಮೈತ್ರಿಕೂಟ ಜಾತಿ ಆಧಾರಿತ ಮತ್ತು ಅರಾಜಕ ನೀತಿಗಳ ಮೇಲೆ ರಚಿತವಾಗಿದೆ ಎಂದು ಕುಟುಕಿದ್ದಾರೆ. ಇನ್ನು ಈ ಮೈತ್ರಿಯಿಂದ ಯಾರು ಭ್ರಷ್ಟರು ಎಂದು ಜನರಿಗೆ ತಿಳಿಯುತ್ತದೆ. ಈ ಪಕ್ಷಗಳ ಮೈತ್ರಿಯಿಂದ ಉತ್ತರ ಪ್ರದೇಶದ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ಇನ್ನು ಈ ಎರಡೂ ಪಕ್ಷಗಳು ಒಟ್ಟಾಗಿ ಚುನಾವಣೆಯನ್ನು ಎದುರಿಸುತ್ತಿರುವುದು ಬಿಜೆಪಿಗೆ ಒಂದು ರೀತಿಯ ಅನುಕೂಲವೇ ಆಗುತ್ತಿದೆ ಎಂದು ಆದಿತ್ಯನಾಥ್​ ತಿಳಿಸಿದ್ದಾರೆ.