‘ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಸಿದ್ದರಾಮಯ್ಯ ಸರ್ಕಾರವೇ ಹೊಣೆ’

ಆನೇಕಲ್: ರಾಜ್ಯ ವಿಧಾನಸಭೆ ಚುನಾವಣಾ ಪ್ರಚಾರದ ಕಾವು ಮುಗಿಲೆತ್ತರಕ್ಕೇರಿದೆ. ರಾಜ್ಯದಲ್ಲಿ ಎಲ್ಲ ಪಕ್ಷಗಳ ಘಟಾನು ಘಟಿ ನಾಯಕರುಗಳೇ ಪ್ರಚಾರದ ಅಖಾಡಕ್ಕೆ ಧುಮಿಕಿದ್ದಾರೆ. ಇವತ್ತು ಕೂಡ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್,​ ಆನೇಕಲ್​​ನಲ್ಲಿ ಬಿಜೆಪಿ ಪರ ಭರ್ಜರಿ ಚುನಾವಣ ಪ್ರಚಾರ ಮಾಡಿದರು. ಆನೇಕಲ್​​ನ ಬಿಜೆಪಿ ಅಭ್ಯರ್ಥಿ ಎ.ನಾರಾಯಣ ಸ್ವಾಮಿ ಪರ ಮತಯಾಚನೆಗೆಂದು ಬೃಹತ್​​ ಬಹಿರಂಗ ಸಮಾವೇಶ ಏರ್ಪಡಿಸಲಾಗಿತ್ತು. ಸಮಾವೇಶದಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯಾನಾಥ್​​, ರಾಜ್ಯದಲ್ಲಿ ಸಂಘಪರಿವಾರದ 24 ಕಾರ್ಯಕರ್ತರ ಹತ್ಯೆಗೆ ಸಿಎಂ ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು. ಕಾಂಗ್ರೆಸ್​​ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖವೆಂದು ಕುಟುಕಿದರು.
‘ಮತ್ತೊಮ್ಮೆ ರಾಮರಾಜ್ಯ ನಿರ್ಮಾಣವಾಗಬೇಕು’

‘ನಾನೂ ಕರ್ನಾಟಕಕ್ಕೆ ಬಂದರೆ, ನನಗೆ ನೆನಪಾಗುವುದು, ನಾನು ರಾಮನ ಊರಿನವನು ಅಂತ. ಹಾಗೇನೆ ರಾಮನ ಭಕ್ತ ಹನುಮಂತನ ಜನ್ಮಭೂಮಿಯಿದು’ ಎಂದು ಬಣ್ಣಿಸಿದ ಯೋಗಿ, ಕರ್ನಾಟಕವು ಸುರಕ್ಷತೆ ರಾಜ್ಯವೆಂದು ಖ್ಯಾತಿಯಾಗಿತ್ತು. ಆದ್ರೆ ರಾಜ್ಯದಲ್ಲಿ ಕಾಂಗ್ರೆಸ್​​ ಆಡಳಿತ ಬಂದ ಮೇಲೆ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದರು. ಬಿಜೆಪಿಯನ್ನು ಗೆಲ್ಲಿಸಿ ಮತ್ತೆ ರಾಮರಾಜ್ಯ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕದ ಸಿಎಂ ಸಿದ್ದರಾಮಯ್ಯನ ಸರ್ಕಾರ ಅಭಿವೃದ್ಧಿ ಮತ್ತು ಮಹಿಳಾ ವಿರೋಧಿಯಾಗಿದೆ ಎಂದು ಯೋಗಿ ಆದಿತ್ಯನಾಥ್​​ ಜರಿದರು. ಈ‌ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು‌ ಆನೇಕಲ್​​ನಲ್ಲಿ ಎ.ನಾರಾಯಣಸ್ವಾಮಿಗೆ ಮತ ನೀಡಬೇಕೆಂದು ಕರೆ ನೀಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv