‘ಅಂತರಂಗ, ಅಂತರಾತ್ಮ ಪದಗಳು ಸೋ‌ಕಾಲ್ಡ್ ಬುದ್ಧಿ ಜೀವಿಗಳ ಡಿಕ್ಷನರಿಯಲ್ಲೇ ಇಲ್ಲ!’

ಧಾರವಾಡ: ನಿಜವಾದ ಬುದ್ಧಿಜೀವಿಗಳ ಬದುಕು ಶರೀರಕ್ಕೆ ಬೇಕಾಗುವ ಅವಶ್ಯಕತೆಗಳನ್ನು ನಿರ್ಮಾಣ ಮಾಡಿಕೊಳ್ಳುವುದು. ಆದರೆ, ಸೋ ಕಾಲ್ಡ್ ಬುದ್ಧಿಜೀವಿಗಳು ಬದುಕು ಅಂದ್ರೆ ಏನು ಅನ್ನೋದನ್ನ ಶರೀರದ ಆಚೆಗೆ ಸಮಗ್ರವಾಗಿ ನೋಡೋದೇ ಇಲ್ಲ. ಅಂತರಂಗ, ಅಂತರಾತ್ಮ ಅನ್ನೋ ಪದ ಸೋ‌ಕಾಲ್ಡ್ ಬುದ್ಧಿ ಜೀವಿಗಳ ಡಿಕ್ಷನರಿಯಲ್ಲೇ ಇಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
ಧಾರವಾಡದಲ್ಲಿ ನಡೆದ ಕೌಶಲ್ಯ ಅಭಿವೃದ್ಧಿ ರಾಷ್ಟ್ರೀಯ ಯುವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಶರೀರವೇ ಬದುಕು ಅಂತಾ ಅವರು ತಿಳಿದಿದ್ದಾರೆ. ಅಂತರಂಗ ಇಲ್ಲದ ಶರೀರವೇ ಬದುಕು ಅನ್ನೋದಾದ್ರೆ ಸತ್ತ ಹೆಣಕ್ಕೂ ಮನುಷ್ಯನಿಗೂ ವ್ಯತ್ಯಾಸವೇ ಇಲ್ಲದಂತಾಗುತ್ತದೆ. ಬುದ್ಧಿಜೀವಿಗಳು‌ ಇದನ್ನು ತಿಳಿದುಕೊಳ್ಳೋದಿಲ್ಲ. ಹೀಗಾಗಿ‌ ಬದುಕು ಅಂದ್ರೆ ಏನು ಅನ್ನೋದನ್ನ ಕಲಿಸುವುದಕ್ಕೆ ಇನ್ನುಮುಂದೆ ವಿಶ್ವವಿದ್ಯಾಲಯಗಳಲ್ಲಿ ಹೊಸಪಠ್ಯ ಜಾರಿಗೆ ತರಬೇಕಾಗಿದೆ. ಯಾರು ಅಂತರಂಗದ ಅನ್ವೇಷಣೆಯಲ್ಲಿ‌ ಹೆಜ್ಜೆ ಇಡುತ್ತಾರೋ ಅವರ ಹೆಜ್ಜೆಯನ್ನು ಅಲುಗಾಡಿಸಲು ಯಾರಿಂದಲೂ‌ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಹೇಳಿದ್ದಾರೆ.
ಯಾರಿಗೆ ಜನರನ್ನು ಅರ್ಥ ಮಾಡಿಕೊಳ್ಳುವ ಯೋಗ್ಯತೆ ಇದೆಯೋ ಅವರಿಗೆ ಜನಸಂಖ್ಯೆಯೇ ಒಂದು ಆಸ್ತಿ. ದೇಶದಲ್ಲಿ ನಾವು 121 ಕೋಟಿ ಜನರಿದ್ದು, ಇದನ್ನು ನಾವು ಹೊರೆ ಅಂದುಕೊಳ್ಳುತ್ತೇವೆ. ಜನರನ್ನು ಅರ್ಥಮಾಡಿಕೊಳ್ಳುವ ಯೋಗ್ಯತೆ ಇಲ್ಲದವರಿಗೆ ಇದು ಹೊರೆ. ಇಂದು ಜಗತ್ತಿನ ಅನೇಕ ದೇಶಗಳಲ್ಲಿ ಜನಸಂಖ್ಯೆ ಕಡಿಮೆ ಆಗ್ತಾ ಇದೆ. ಜಗತ್ತಿನಲ್ಲಿ ಯಾವ ಯಾವ ದೇಶದಲ್ಲಿ ಜನಸಂಖ್ಯೆ ಕಡಿಮೆಯಾಗ್ತಾ ಇದೆಯೋ ಅಲ್ಲೆಲ್ಲ ನಮ್ಮ ದೇಶದ ಜನ ಗಡಿ ದಾಟಿ ಹೋಗಬೇಕು. ಅಲ್ಲಿ ಬೆಳೆದು ಆಳ್ವಿಕೆ ಮಾಡುವ ಮೂಲಕ ನಮ್ಮ ದೇಶದ ರಕ್ತ (ಜನರು) ಜಗತ್ತನ್ನು ಆಳಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
50 ವರ್ಷ ಹಿಂದೆ ನಮ್ಮ ಜನ ಅಮೇರಿಕಾ ದೇಶಕ್ಕೆ ಹೋದ್ರೆ ಅಲ್ಲಿ ಗೌರವ ಸಿಗುತ್ತಾ ಇರಲಿಲ್ಲ. ಆದರೆ, ಇಂದು ಅಮೇರಿಕಾ ಪ್ರೆಸಿಡೆಂಟ್ ಭಾರತೀಯ ಸಮುದಾಯ ಇದ್ದಲ್ಲಿ ಬಂದು ಗೌರವ ಕೊಡ್ತಿದ್ದಾರೆ. ಕೆಲವರು ಚುನಾವಣೆಯಲ್ಲಿ ಗೆದ್ದ ನಂತರ ನಾನೇ ಬಾಸ್ ಅಂತಾ ತಿಳ್ಕೋತಾರೆ. ನಾನೇ ಬಾಸ್ ಅಂದವರು ಒಂದು ಗೆಲುವಿಗೆ ಮಾತ್ರ ಸೀಮಿತರಾಗುತ್ತಾರೆ. ಮುಂದಿನ ಚುನಾವಣೆಯಲ್ಲಿ ಅವರು ಸೋಲೋದು ಗ್ಯಾರಂಟಿ ಅಂತಾ ಸಚಿವ ಹೆಗಡೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv