ಲಂಡನ್​​ ಗೆದ್ದ ರಾಜ್ಯದ ಬಿದ್ರಿ ಕಲೆ, 17ನೇ ಶತಮಾನದ ಹರಿವಾಣ ಉಳಿಸಿಕೊಳ್ಳಲು ಸರ್ಕಸ್​..!

ಭಾರತ ಕಲೆಗಳ ಆಗರ. ತನ್ನ ವಿಭಿನ್ನ ಶೈಲಿ, ಕಲೆ, ಸಾಹಿತ್ಯ, ವಾಸ್ತು ಶಿಲ್ಪದಿಂದ ಸುವರ್ಣ ಯುಗವನ್ನೂ ಕಂಡ ರಾಷ್ಟ್ರ. ಅದೆಷ್ಟೋ ವಿಶಿಷ್ಟ ಕಲಾ ನೈಪುಣ್ಯತೆ ಹೊಂದಿರುವ ಶಿಲ್ಪಗಳು ಸಾಕಷ್ಟು ವಿದೇಶಿಗರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಸದ್ಯ ಈಗ ಬ್ರಿಟನ್ನಲ್ಲಿರುವ ಭಾರತದ ಅಂತಹದ್ದೇ ಒಂದು ಅತ್ಯಮೂಲ್ಯ ವಸ್ತು ಭಾರೀ ಸುದ್ದಿ ಮಾಡ್ತಿದೆ.

ಬೀದರ್​ನ ಕರಕುಶಲ ಕಲಾವಿದರೊಬ್ಬರು ತಯಾರು ಮಾಡಿದ್ದ ಬಿದ್ರಿ ಕಲೆಯುಳ್ಳ ಟ್ರೇಯನ್ನ ಭಾರತಕ್ಕೆ ವಾಪಸ್​​ ತರಲು ಹಗ್ಗಜಗ್ಗಾಟ ನಡೀತಿದೆ. 17 ನೇ ಶತಮಾನದ ಈ ಟ್ರೇಯನ್ನು ಬ್ರಿಟನ್​ ಸರ್ಕಾರ ಉಳಿಸಿಕೊಳ್ಳಲು ಶತಪ್ರಯತ್ನ ಮಾಡ್ತಿದೆ. ಸದ್ಯ ಈ ಬಿದ್ರಿ ತಟ್ಟೆಯನ್ನ ಲಂಡನ್​​ನಲ್ಲಿ ಹರಾಜಿಗಿಡಲಾಗಿದೆ. ಆದ್ರೆ ಅದನ್ನು ಬ್ರಿಟನ್‌ನಿಂದ ಹೊರಕ್ಕೆ ಸಾಗಿಸಲು ಅನುಮತಿ ನೀಡದಿರಲು ಅಲ್ಲಿನ ಸರಕಾರ ನಿರ್ಧರಿಸಿದೆ. ಬ್ರಿಟನ್​​ನಲ್ಲೇ ಇರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಇದನ್ನು ಖರೀದಿಸ ಬಹುದಾಗಿದೆ. ಆದ್ರೆ ಖರೀದಿಸುವಾತ ವಿದೇಶಕ್ಕೆ ಸಾಗಿಸಲು ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದರೂ ಸಿಗದು. ಹೀಗಿದ್ರೂ ಬ್ರಿಟನ್ ಸರ್ಕಾರ ರಫ್ತು ಪರವಾನಿಗೆ ಏಪ್ರಿಲ್​ 17 ಕ್ಕೆ ದಿನಾಂಕ ನಿಗದಿಪಡಿಸಿದ್ದು, ಅದನ್ನು ಮತ್ತೆ ಮೂರು ತಿಂಗಳವರೆಗೂ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗಿದೆ. ಬಿದ್ರಿ ಟ್ರೇಗೆ ಖರೀದಿ ಮೊತ್ತ 75 ಸಾವಿರ ಯುರೋಗೆ  (₹69.13 ಲಕ್ಷ) ನಿಗದಿ ಪಡಿಸಿದ್ದು, ಇದಕ್ಕೆ ವ್ಯಾಟ್​ ಕೂಡ ಸೇರಿಕೊಳ್ಳಲಿದೆ.

ಬಿದ್ರಿ ಟ್ರೇ ಇತಿಹಾಸ:
ತನ್ನದೇ ಆದ ಕುಸುರಿ ಕಲೆ ಮೂಲಕ ಕಣ್ಮನ ಸೆಳೆಯುವ ಈ ಬಿದಿರಿ ಟ್ರೇ, ಮೂಲತಃ ಬೀದರ್​ ಜಿಲ್ಲೆಯದ್ದು. ಬೀದರ್​ನಲ್ಲಿ ಆಳ್ವಿಕೆ ಮಾಡಿದ್ದ ಬಹಮನಿ ಸುಲ್ತಾನರ ಕಾಲದಲ್ಲಿ ಈ ಟ್ರೇಯನ್ನು ತಯಾರು ಮಾಡಲಾಗಿತ್ತು ಎಂದು ಹೇಳಲಾಗಿದೆ. ಬೀದರ್​ನ ಅನ್ವರ್ಥ ನಾಮವಾಗೇ ಈ ಕಲೆಗೆ ಬಿದಿರಿ ಅಥವಾ ಬಿದ್ರಿ ಎಂಬ ಹೆಸರು ಬಂದಿದೆ. ಝಿಂಕ ಕಾಪರ ಹಾಗೂ ಲಿಡ್​​ ಧಾತುಗಳನ್ನು ಕರಗಿಸಿ ತಯಾರಿಸಿದ ಆಕೃತಿಗಳ ಮೇಲೆ ರೇಖಾ ಚಿತ್ರ ಕೊರೆದು ಅದರಲ್ಲಿ ಬೆಳ್ಳಿ ತಂತಿ ಪದರು ಇನ್‍ಲೇ ಮಾಡಲಾಗುತ್ತದೆ. ನೋಡಲು ನೀರಿನ ಹನಿಯ ಆಕಾರದಲ್ಲಿರುವ ಈ ಬಿದಿರಿ ಟ್ರೇ ಮೇಲೆ ಸೂಕ್ಷ್ಮ ರೂಪದಲ್ಲಿ ಕುಸುರಿ ಕೆತ್ತಲಾಗಿದೆ. 17 ನೇ ಶತಮಾನದಲ್ಲಿ ಭಾರತ ಹಾಗೂ ಬ್ರಿಟನ್​ನೊಂದಿಗಿನ ವ್ಯವಹಾರಿಕ ಸಂಬಂಧದಿಂದ ಈ ಟ್ರೇ ಬ್ರಿಟನ್​ ಸರ್ಕಾರದ ಕೈ ಸೇರಿತು ಎಂದು ಇತಿಹಾಸ ಹೇಳುತ್ತದೆ. ಬಳಿಕ ಇದರಲ್ಲಿ ಬಳಕೆಯಾದ ಲೋಹದ ತಂತ್ರಗಾರಿಕೆಯನ್ನು ಬಳಸಿ ಬ್ರಿಟನ್​ ಸರ್ಕಾರ ಕೈಗಾರಿಕಾ ಅಭಿವೃದ್ಧಿಯನ್ನು ಕಂಡಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.