ಕ್ರಿಕೆಟ್​​ ಕೈ ಹಿಡಿಯಲಿಲ್ಲ ಅಂತ ಕುತ್ತಿಗೆ ಸರಕ್ಕೆ ಕೈ ಹಾಕಿದ್ದ ಖದೀಮರು ಅಂದರ್..!

ಬೆಂಗಳೂರು: ಸರಗಳ್ಳರಿಬ್ಬರನ್ನು ಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ. ನವೀನ್ ಶೆಟ್ಟಿ ಹಾಗೂ ಬಾಲುಕುಮಾರ್ ಬಂಧಿತ ಆರೋಪಿಗಳು.. ಬಂಧಿತ ಆರೋಪಿಗಳಿಬ್ಬರು ಲಿಂಗರಾಜಪುರದವರು. ಇಬ್ಬರು ಆರೋಪಿಗಳು ಕ್ರಿಕೆಟ್ ಆಟಗಾರರಾಗಿದ್ರು. ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಕೆ.ಐ.ಓ.ಸಿ ತರಬೇತಿಗೆ ಸೇರಲು ಬಯಸಿದ್ರು. ಅದರಂತೆ ತರಬೇತಿಗೆ ಸೇರಲು 3೦ ಸಾವಿರ ಹಣ ಕಟ್ಟಬೇಕಾಗಿತ್ತು. ಆದ್ರೆ ಆರೋಪಿಗಳ ಹತ್ತಿರ ಕ್ರಿಕೆಟ್ ತರಬೇತಿಗೆ ನೀಡಲು ಹಣ ಇರಲಿಲ್ಲ. ಹಾಗಾಗಿ ಆರೋಪಿಗಳಿಬ್ಬರು ಸರಗಳ್ಳತನಕ್ಕೆ ಇಳಿದಿದ್ದರು. ಇದ್ರಿಂದ ಸುಲಭವಾಗಿ ಹಣ ಬಂದಿದ್ದರಿಂದ ಐಶಾರಾಮಿ ಲೈಫ್ ಸ್ಟೈಲ್‌ಗೆ ಇಬ್ಬರು ಮಾರು ಹೋಗಿದ್ರು. ನಂತರ ಕ್ರಿಕೆಟ್ ಆಡೋದನ್ನ ಬಿಟ್ಟು ಸರಗಳ್ಳತನವನ್ನೇ ಫುಲ್ ಟೈಂ ಬುಜಿನೆಸ್ ಮಾಡಿಕೊಂಡಿದ್ದರು ಎನ್ನಲಾಗಿದೆ.

ಇನ್ನು ಬಂಧಿತ ಆರೋಪಿಗಳು ಒಂಟಿ ಮಹಿಳೆಯರು ಹಾಗೂ ಸಂಜೆ ವೇಳೆ ಓಡಾಡುವ ವೃದ್ದರನ್ನೇ ಟಾರ್ಗೆಟ್ ಮಾಡ್ತಿದ್ರು. ಸುಮಾರು 21 ಸರಗಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ರು. ಅಲ್ಲದೇ ಬೆಂಗಳೂರಿನ ಚಾರ್ಲ್ಸ್ ಗ್ರೌಂಡ್‌ನಲ್ಲಿ ಬೈಕ್ ಓಡಿಸುತ್ತಾ ಸರಗಳತನ ಮಾಡುವುದು ಹೇಗೆ ಎಂಬುದರ ಬಗ್ಗೆ ಆರೋಪಿಗಳು ತರಬೇತಿ ಪಡೆದಿದ್ದರು. ಜಯನಗರ ಠಾಣೆಯಲ್ಲಿ ಮೂರು ಪ್ರಕರಣ, ಉತ್ತರ ವಿಭಾಗ , ಅಗ್ನೇಯ ವಿಭಾಗ ಸೇರಿದಂತೆ ನಗರದಾದ್ಯಂತ ನಡೆದಿದ್ದ ಸರಗಳ್ಳತನ ಪ್ರಕರಣಗಳು ಪತ್ತೆಯಾದಂತಾಗಿದೆ.

ಸಿನಿಮಾ ಶೈಲಿಯಲ್ಲಿ ಚೇಸ್ ಮಾಡಿ ಕಳ್ಳರನ್ನು ಹಿಡಿದ ಪೊಲೀಸರು…!
ಸರಗಳ್ಳತನಮಾಡಿ ಎಸ್ಕೇಪ್ ಆಗುವಾಗ ಸಿಸಿಟಿವಿ ದೃಶ್ಯ ನೋಡಿ,ಆರೋಪಿಗಳನ್ನ ಜಯನಗರ ಉಪವಿಭಾಗ ಪೊಲೀಸರು ಪತ್ತೆ ಮಾಡಿ ಮೂರು ಗಂಟೆಗಳಲ್ಲಿಯೇ ಆರೋಪಿಗಳನ್ನು ಬಂಧಿಸಿದ್ದಾರೆ.
ಜಯನಗರ ಉಪವಿಭಾಗ ಎಸಿಪಿ ಶ್ರೀನಿವಾಸ್ ನೇತೃತ್ವದಲ್ಲಿ ಎಸಿಪಿ ಸ್ಕ್ವಾಡ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಸಿನಿಮಾ ಶೈಲಿಯಲ್ಲಿ ಚೇಸ್ ಮಾಡಿ ಸರಗಳ್ಳರನ್ನ ಹಿಡಿದಿದ್ದಾರೆ. ಬೈಕ್‌ನಲ್ಲಿ ಚೇಸ್ ಮಾಡಿ ಆರೋಪಿಗಳ ಬೈಕ್‌ಗೆ ಡಿಕ್ಕಿ ಹೊಡೆದು ಬೀಳಿಸಿದ್ದಾರೆ. ಬಳಿಕ ಆರೋಪಿಗಳನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv