ಕಟ್ಟಡ ಕುಸಿತದಲ್ಲಿ ಮೂವರ ದುರ್ಮರಣ, 55 ಜನರ ರಕ್ಷಣೆ

ಧಾರವಾಡ:  ವಿದ್ಯಾನಗರದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತದಿಂದಾಗಿ ಮೂವರು ಮೃತಪಟ್ಟಿದ್ದಾರೆ. ಕಟ್ಟಡದ ಕೆಳಗೆ ಸುಮಾರು 60 ರಿಂದ 70 ಜನ ಸಿಲುಕಿರುವ ಶಂಕೆ ಇದ್ದು, ಇಲ್ಲಿಯವರೆಗೆ ಒಟ್ಟು 55 ಜನರ ರಕ್ಷಣೆ ಮಾಡಲಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನುಳಿದವರಿಗಾಗಿ NDRF ತಂಡ ರಾತ್ರಿಯಿಡೀ ಶೋಧಕಾರ್ಯ ನಡೆಸಿದ್ದು, ರಕ್ಷಣಾ ಕಾರ್ಯ ಇನ್ನೂ ಮುಂದುವರಿದಿದೆ. ಲಖನೌದಿಂದ 25 ಜನರ ಎನ್‌ಡಿಆರ್‌ಎಫ್ ತಂಡ ಧಾರವಾಡಕ್ಕೆ ಧಾವಿಸಿದ್ದು, ಶೋಧಕಾರ್ಯ ನಡೆಸ್ತಿದೆ. ಇನ್ನು ಸ್ಥಳೀಯರ ನೆರವಿನಿಂದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಬಿಎಸ್​ಎಫ್​​ ಯೋಧರು ರಕ್ಷಣೆಯಲ್ಲಿ ತೊಡಗಿದ್ದಾರೆ. ಜೊತೆಗೆ ಬೆಂಗಳೂರಿನಿಂದ ಐವರು ತಜ್ಞರ ತಂಡ ಕೂಡಾ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ. ಇನ್ನು, ಗಾಯಾಳುಗಳನ್ನು ಸಾಗಿಸಲು 10ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳು ಸ್ಥಳದಲ್ಲಿ ಬೀಡುಬಿಟ್ಟಿವೆ. ಜೆಸಿಬಿ, ಕ್ರೇನ್​ ಮೂಲಕ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ವು.

ಯಾರು ಆತಂಕಕ್ಕೆ ಒಳಗಾಗಬೇಡಿ ಎಂದ ಸಿಎಂ
ಇನ್ನು, ಕಟ್ಟಡ ದುರಂತದ ಬಗ್ಗೆ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಸಂಪೂರ್ಣ ಮಾಹಿತಿ ಪಡೆದಿದ್ದು, ರಕ್ಷಣಾ ಕಾರ್ಯಾಚರಣೆಗೆ ಸೂಕ್ತ ಕ್ರಮ ಕೈಗೊಳ್ಳವಂತೆ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ಅವಘಡದಿಂದ ನನಗೆ ಶಾಕ್ ಆಗಿದೆ. ಅವಶೇಷದಡಿ ಸಿಲುಕಿದವರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಗರದ ಜನರು ಭಯಪಡಬೇಡಿ ಎಂದಿದ್ದಾರೆ.