ಓಟದ ಸ್ಪರ್ಧೆ ವೇಳೆ ಇಬ್ಬರು ಯುವಕರಿಗೆ ತಿವಿದ ಎತ್ತು!

ಕಲಬುರ್ಗಿ: ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿ ನಿನ್ನೆ ಕಾರಹುಣ್ಣಿಮೆ ನಿಮಿತ್ತ ಏರ್ಪಡಿಸಿದ್ದ, ಎತ್ತಿನ ಓಟದ ಸ್ಪರ್ಧೆಯ ವೇಳೆ ಇಬ್ಬರು ಯುವಕರಿಗೆ ಎತ್ತು ತಿವಿದು ಗಾಯಗೊಂಡಿರುವ ಘಟನೆ ನಡೆದಿದೆ.
ಮುಧೋಳ ಗ್ರಾಮದಲ್ಲಿ ಕಾರಹುಣ್ಣಿಮೆ ನಿಮಿತ್ತ ಕರಿ ಹರಿಸುವ ಸಂದರ್ಭದಲ್ಲಿ ಗ್ರಾಮಸ್ಥರು ಸೇರಿಕೊಂಡು ಎತ್ತುಗಳ ಓಟದ ಸ್ಪರ್ಧೆಯನ್ನ ಏರ್ಪಡಿಸಿದ್ದರು. ಈ ವೇಳೆ ಜನಜಂಗುಳಿಯ ಚೀರಾಟ ಹಾಗೂ ಶಿಳ್ಳೆಗಳ ಶಬ್ದದಿಂದ ತೀವ್ರ ಗಲಿಬಿಲಿಗೊಂಡ ಎತ್ತೊಂದು ಎದುರಿಗೆ ಬಂದ ಶ್ರವಣಕುಮಾರ ಎಂಬಾತನಿಗೆ ಕೊಂಬಿನಿಂದ ತಿವಿದಿದೆ.‌ ಅಲ್ಲದೇ ತನ್ನ ಕೊಂಬಿನಿಂದ ಆ ಯುವಕನನ್ನ ಎಳೆದಾಡಿ ಮೇಲಕ್ಕೆ ಎತ್ತಿ ಕೆಳಗೆ ಬಿಸಾಡಿದೆ. ಇದೇ ವೇಳೆ ಮತ್ತೋರ್ವ ಯುವಕ ಆನಂದ್ ಎಂಬಾತನನ್ನ ಕೆಳಗೆ ಬಿಸಾಕಿ, ಅವನ ಮುಖದ ಮೇಲೆ‌ ಕಾಲಿಟ್ಟು ಓಡಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಲಬುರ್ಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv