ಇಬ್ಬರು ಭಾರತೀಯರಿಗೆ ಸೌದಿಯಲ್ಲಿ ಗಲ್ಲು ..!

ಚಂಡೀಗಢ: ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಭಾರತೀಯರನ್ನು ಸೌದಿಯಲ್ಲಿ ಗಲ್ಲಿಗೇರಿಸಲಾಗಿದೆ. ಭಾರತೀಯ ಸ್ನೇಹಿತನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಫೆಬ್ರವರಿ 28ರಂದು ಹೋಶಿಯಾರ್​​ಪುರ್​ ಮೂಲದ ಸತ್ವಿಂದರ್​ ಸಿಂಗ್​​ ಹಾಗೂ ಲುಧಿಯಾನಾ ಮೂಲದ ಹರ್ಜೀರ್​ ಸಿಂಗ್​​ನನ್ನು ಗಲ್ಲಿಗೇರಿಸಿರುವುದಾಗಿ ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ಆದ್ರೆ ಸೌದಿ ಅಧಿಕಾರಿಗಳು ಗಲ್ಲು ಶಿಕ್ಷೆ ನೀಡುವುದಕ್ಕೂ ಮುನ್ನ ರಿಯಾದ್​​ನಲ್ಲಿರೋ ಭಾರತೀಯ ರಾಯಭಾರಿಗೆ ಈ ಬಗ್ಗೆ ಮಾಹಿತಿ ನೀಡಿಲ್ಲ. ಅಲ್ಲದೆ ಸೌದಿ ನಿಯಮಗಳ ನೆಪವೊಡ್ಡಿ ಮೃತರ ಕುಟುಂಬಗಳಿಗೆ ಶವಗಳನ್ನು ಕೂಡ ಹಸ್ತಾಂತರ ಮಾಡಿಲ್ಲ ಎಂದು ತಿಳಿದುಬಂದಿದೆ.

ತಾವು ಲೂಟಿ ಹೊಡೆದಿದ್ದ ಹಣದ ಹಂಚಿಕೆ ವಿಚಾರವಾಗಿ ಜಗಳ ಮಾಡಿಕೊಂಡ ಕಾರಣ ಹರ್ಜೀತ್​ ಹಾಗೂ ಸತ್ವಿಂದರ್,​​ ಇಮಾಮುದ್ದೀನ್​​​ ಎಂಬವನನ್ನ ಕೊಲೆ ಮಾಡಿದ್ದರು. ಕೆಲವು ದಿನಗಳ ನಂತರ ಇಬ್ಬರೂ ಕುಡಿದು, ಗಲಾಟೆ ಮಾಡಿಕೊಂಡು ಅರೆಸ್ಟ್​ ಆಗಿದ್ದರು. ಇಬ್ಬರನ್ನು ಗಡಿಪಾರು ಮಾಡಲು ಸಿದ್ಧತೆ ನಡೆಯುವ ವೇಳೆ ಕೊಲೆ ಪ್ರಕರಣದಲ್ಲಿ ಇವರು ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಇಬ್ಬರನ್ನೂ ವಿಚಾರಣೆಗಾಗಿ ರಿಯಾದ್​​​ ಜೈಲಿಗೆ ಕಳಿಸಲಾಗಿತ್ತು.

ಇನ್ನು ಸತ್ವಿಂದರ್​​ ಕುಮಾರ್ ಪತ್ನಿ ಸೀಮಾ ರಾಣಿ ಪಿಟಿಷನ್​ ಸಲ್ಲಿಸಿದ ಬಳಿಕ ಇಬ್ಬರನ್ನೂ ಗಲ್ಲಿಗೇರಿಸಿರುವ ವಿಷಯವನ್ನು ವಿದೇಶಾಂಗ ಸಚಿವಾಲಯ ಬಹಿರಂಗಪಡಿಸಿದೆ. ಇಮಾಮುದ್ದೀನ್​ ಕೊಲೆ ಪ್ರಕರಣದಲ್ಲಿ 2015ರ ಡಿಸೆಂಬರ್​ 9ರಂದು ಸತ್ವಿಂದರ್​ ಹಾಗೂ ಹರ್ಜಿತ್​ನನ್ನು ಅರೆಸ್ಟ್​ ಮಾಡಲಾಗಿತ್ತು. ನಂತರ ರಿಯಾದ್​​ ಜೈಲಿಗೆ ಕಳಿಸಲಾಯ್ತು. ಅಲ್ಲಿ ಇಬ್ಬರೂ ತಮ್ಮ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದರು. 2017ರ ಮೇ 31ರಂದು ಇವರ ಪ್ರಕರಣದ ವಿಚಾರಣೆಗೆ ರಾಯಭಾರಿ ಅಧಿಕಾರಿ ಹಾಜರಾಗಿದ್ದರು. ​ಇನ್ನು ಹೈವೇ ರಾಬರಿ ಪ್ರಕರಣದ ಆರೋಪದ ಜೊತೆಗೆ ಈ ಪ್ರಕರಣವನ್ನ ಅಪೀಲ್ಸ್​​ಗೆ ಕೋರ್ಟ್​ಗೆ ವರ್ಗಾಯಿಸಲಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ತಿಳಿದುಬಂದಿದೆ.

ವಿಚಾರಣೆಯ ಹಂತಗಳ ಬಗ್ಗೆ ತಿಳಿಯಲು ರಾಯಭಾರಿ ಅಧಿಕಾರಿಗಳು ಆಗಾಗ ಜೈಲಿಗೆ ಭೇಟಿ ನೀಡುತ್ತಿದ್ದರು. ಆದ್ರೆ ರಾಯಭಾರಿಗಳಿಗೆ ತಿಳಿಸದೆಯೇ ಕಳೆದ ಫೆಬ್ರವರಿ 28ರಂದು ಇಬ್ಬರನ್ನೂ ಗಲ್ಲಿಗೇರಿಸಲಾಗಿದೆ ಎಂದು ಕಾನ್ಸುಲರ್​​ ಪ್ರಕಾಶ್​ ಚಂದ್​ ಬರೆದಿರುವ ಪತ್ರದಿಂದ ತಿಳಿದುಬಂದಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv